ಪ್ರವಾದಿ ಮೊಹಮ್ಮದ ಪೈಗಂಬರ್ ಅವರು ಬಾಲ್ಯದಲ್ಲಿಯೇ ಇಸ್ಲಾಂ ಧರ್ಮದ ದೇವದೂತರಾಗಿ ಸಮಾಜಕ್ಕೆ ಸತ್ಯ ಶಾಂತಿ ಸಂದೇಶ ಸಾರುವ ಮೂಲಕ ಜನರಿಂದ ಅಲ್ ಅಮೀನ ಬಿರುದು ಪಡೆದವರಾಗಿದ್ದರು ಎಂದು ಹೋತನಹಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಗೌಸ್‌ಮೋದಿನ ದ್ಯಾಮನಕೊಪ್ಪ ಹೇಳಿದರು.
ಶಿಗ್ಗಾಂವಿ: ಪ್ರವಾದಿ ಮೊಹಮ್ಮದ ಪೈಗಂಬರ್ ಅವರು ಬಾಲ್ಯದಲ್ಲಿಯೇ ಇಸ್ಲಾಂ ಧರ್ಮದ ದೇವದೂತರಾಗಿ ಸಮಾಜಕ್ಕೆ ಸತ್ಯ ಶಾಂತಿ ಸಂದೇಶ ಸಾರುವ ಮೂಲಕ ಜನರಿಂದ ಅಲ್ ಅಮೀನ ಬಿರುದು ಪಡೆದವರಾಗಿದ್ದರು ಎಂದು ಹೋತನಹಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಗೌಸ್‌ಮೋದಿನ ದ್ಯಾಮನಕೊಪ್ಪ ಹೇಳಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಈದ್ ಮಿಲಾದ ಹಬ್ಬದಂಗವಾಗಿ ಅಂಜುಮನ್ ಸಂಸ್ಥೆ ಆಶ್ರಯದಲ್ಲಿ ನಡೆದ, ಧರ್ಮಬೋಧನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮೊಹಮ್ಮದ ಪೈಗಂಬರ ಅವರು, ಅಬ್ದುಲ್ಲಾ, ಅಮೀನಾ ದಂಪತಿ ಶ್ರೇಷ್ಠಗರ್ಭದಲ್ಲಿ ಕ್ರಿ.ಶ. ೫೭೦ರಲ್ಲಿ ಸೌದಿಅರೇಬಿಯಾದ ಮಕ್ಕಾ ನಗರದಲ್ಲಿ ಜನಿಸಿದರು. ಅವರ ೪೦ನೇ ವರ್ಷದಲ್ಲಿ ಮಕ್ಕಾ ಗುಹೆಯಲ್ಲಿ ದೇವದೂತರಿಂದ ದೈವಿಕ ಸಂದೇಶ ಪಡೆದ ಅವರು, ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರಾಗಿದ್ದರು. ಅಂತಹ ಮಹನೀಯರ ಆದರ್ಶಗುಣಗಳನ್ನು ಇಂದಿನ ಮಕ್ಕಳು ಮೈಗೂಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.ತನ್ನಿಮಿತ್ತ ಮುಸಲ್ಮಾನ ಬಾಂಧವರು ಗ್ರಾಮದ ಮುಖ್ಯಬೀದಿಗಳಲ್ಲಿ ಮೊಹಮ್ಮದ ಪೈಗಂಬರ್ ಜೀವನ ಆಧಾರಿತ ಗೀತೆಗಳನ್ನು ಹಾಡುವ ಮೂಲಕ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸಾಗಿಬರುವವರಿಗೆ ಸಿಹಿ ಮತ್ತು ಹಣ್ಣು, ತಂಪುಪಾನೀಯಗಳನ್ನು ವಿತರಿಸಲಾಯಿತು. ನಂತರ ಮೆರವಣಿಗೆ ಮದರಸಾವರೆಗೆ ಸಾಗಿಬಂದ ಸಂಪನ್ನಗೊಂಡಿತು. ಸಭೆಯಲ್ಲಿ ಮದರಸಾದ ವಿದ್ಯಾರ್ಥಿಗಳಿಗೆ ಕುರಾನ ಗ್ರಂಥ ಹೊಸ ಬಟ್ಟೆ ಅಂಜುಮನ್ ಸಂಸ್ಥೆಯಿಂದ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಹಜರೇಸಾಬ ಬಂಕಾಪುರ, ಅಬ್ದುಲ್‌ಸಾಬ ಧರಂಪೂರಿ, ಗೌಸ್‌ಸಾಬ ನಾರಾಯಣಪುರ, ಯುನುಸ್‌ಖಾನ ಕಲ್ಯಾಣ, ಖಾಸೀಂಸಾಬ ದ್ಯಾಮನಕೊಪ್ಪ, ನಜೀರ್‌ಸಾಬ ದ್ಯಾಮನಕೊಪ್ಪ, ಶರೀಫ್‌ಸಾಬ ಮತ್ತಿಗಟ್ಟಿ, ಮೌಲಾಸಾಬ ಕಲ್ಯಾಣ, ಮೌಲಾನಾ ಹಾಫೀಜಿ ಸೇರಿದಂತೆ ಮದರಸಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.