ನಗರಕ್ಕೆ ಪ್ರತ್ಯೇಕ ಆರೋಗ್ಯ ಆಯುಕ್ತಾಲಯಕ್ಕೆ ಪ್ರಸ್ತಾವ

| Published : Jan 11 2024, 01:31 AM IST

ಸಾರಾಂಶ

ನಗರಕ್ಕೆ ಪ್ರತ್ಯೇಕ ಆರೋಗ್ಯ ಆಯುಕ್ತಾಲಯಕ್ಕೆ ಪ್ರಸ್ತಾವ. ರಾಜಧಾನಿಯ ಎಲ್ಲ ಖಾಸಗಿ, ಸರ್ಕಾರಿ ಆಸ್ಪತ್ರೆಗಳ ಮೇಲೆ ನಿಯಂತ್ರಣಕ್ಕೆ ಬಿಬಿಎಂಪಿ ಪ್ರಸ್ತಾವನೆ. ಇದರಿಂದ ಶೀಘ್ರ ಕ್ರಮ ಸಾಧ್ಯ ಎಂದು ವಾದ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಆರೋಗ್ಯ ಇಲಾಖೆಯಡಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ, ಮೇಲ್ವಿಚಾರಣೆ, ತಪ್ಪು ಎಸಗಿದರೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಪ್ರತ್ಯೇಕ ‘ಆರೋಗ್ಯ ಆಯುಕ್ತಾಲಯ’ ಮಂಜೂರು ಮಾಡಿ ‘ಬೆಂಗಳೂರು ಆರೋಗ್ಯ ವ್ಯವಸ್ಥೆ’ ಜಾರಿಗೆ ಕೋರಿ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಲ್ಯಾಬೋರೇಟರಿಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಇದೀಗ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈಗಿರುವ ಸಮಸ್ಯೆಗಳೇನು?

ಪ್ರತ್ಯೇಕ ಇಲಾಖೆಯಡಿ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದರಿಂದ ರೋಗಿಗಳ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಯ ರೋಗಿಗಳ ವಿವರ ಬಿಬಿಎಂಪಿಗೆ ಸಲ್ಲಿಕೆ ಆಗುತ್ತಿಲ್ಲ. ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ಲ್ಯಾಬೋರೇಟರಿಗಳ ನಿಯಂತ್ರಣ ಕೆಪಿಎಂಇ ಕಾಯ್ದೆ ಇದೆ. ಈ ಕಾಯ್ದೆಯ ಕಾರ್ಯ ವ್ಯಾಪ್ತಿ ನಗರ ಜಿಲ್ಲಾಧಿಕಾರಿಗಳ ಅಧೀನದಲ್ಲಿದೆ.

ಇನ್ನು ಭ್ರೂಣ ಲಿಂಗ ಪತ್ತೆ ಮಾಡುವ ಆಸ್ಪತ್ರೆ, ಕ್ಲಿನಿಕ್‌, ಲ್ಯಾಬೋರೇಟರಿ ನಿಯಂತ್ರಣ ಮಾಡುವ ಪಿಸಿಪಿಎನ್‌ಡಿಟಿ ಕಾಯ್ದೆಗೆ ಇದೆ. ಇದರ ಕಾರ್ಯವ್ಯಾಪ್ತಿಯೂ ನಗರ ಜಿಲ್ಲಾಧಿಕಾರಿಗಳಿಗೆ ಇದೆ. ಲೋಪ ಎಸಗುವವರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಜತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಗೊಂದಲ ನಿವಾರಣೆಗೆ ಬೆಂಗಳೂರು ಆರೋಗ್ಯ ವ್ಯವಸ್ಥೆ ಅಗತ್ಯವಾಗಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಬದಲಾಗುವ ಅಂಶಗಳೇನು?

ಬೆಂಗಳೂರು ಆರೋಗ್ಯ ವ್ಯವಸ್ಥೆ ಜಾರಿಯಿಂದ ಬಿಬಿಎಂಪಿಗೆ ಒಂದು ಆರೋಗ್ಯ ಆಯುಕ್ತಾಲಯ ಮಂಜೂರಾಗಲಿದೆ. ಆಗ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು, ಆರೋಗ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆರೋಗ್ಯ ಆಯುಕ್ತರು ಎಲ್ಲ ಆಡಳಿತಾತ್ಮಕ ವಿಷಯಗಳನ್ನು ಮುಖ್ಯ ಆಯುಕ್ತರಿಗೆ ಸಲ್ಲಿಸುವ ಜೊತೆಗೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡಬೇಕಾಗುತ್ತದೆ.

ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಎಲ್ಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳು, ರೆಫರಲ್‌ ಆಸ್ಪತ್ರೆಗಳು ಸಂಪೂರ್ಣವಾಗಿ ಬಿಬಿಎಂಪಿಯಡಿ ಕಾರ್ಯನಿರ್ವಹಿಸಲಿವೆ. ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯಡಿ ಇರಲಿವೆ.

ದ್ವಿತೀಯ ಹಂತದ ಆರೋಗ್ಯ ಸೇವೆ ನೀಡುವ ಕೆ.ಸಿ.ಜನರಲ್‌, ಜಯನಗರ ಜನರಲ್‌ ಆಸ್ಪತ್ರೆ, ಸಾಂಕ್ರಾಮಿಕ ರೋಗದ ಆಸ್ಪತ್ರೆಗಳು ಬಿಬಿಎಂಪಿ ಆರೋಗ್ಯ ಆಯುಕ್ತರ ಮೂಲಕ ಮುಖ್ಯ ಆಯುಕ್ತರಿಗೆ ವರದಿ ಮಾಡಬೇಕಾಗುತ್ತದೆ.

ಇನ್ನು ಉನ್ನತ ಮತ್ತು ತೃತೀಯ ಹಂತದ ಆರೋಗ್ಯ ಸೇವೆ ಒದಗಿಸುವ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಮೆಮೊರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆಗಳ ಆಡಳಿತ ಮಂಡಳಿ ಸಮಿತಿಯಲ್ಲಿ ಪಾಲಿಕೆ ಆರೋಗ್ಯ ಆಯುಕ್ತರು ವಿಶೇಷ ನಾಮ ನಿರ್ದೇಶನ ಸದಸ್ಯರು ಅಥವಾ ವಿಶೇಷ ಆಹ್ವಾನಿತರಾಗಿರುತ್ತಾರೆ. ಒಟ್ಟಾರೆ ಎಲ್ಲ ಆಸ್ಪತ್ರೆಗಳು ಬಿಬಿಎಂಪಿ ಮುಖ್ಯ ಆಯುಕ್ತರ ನಿಗಾದಲ್ಲಿ ಇರಲಿವೆ. ಮುಖ್ಯ ಆಯುಕ್ತರು ಆಡಳಿತಾತ್ಮಕ ವಿಷಯ ಹಾಗೂ ವರದಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಆರೋಗ್ಯ ಸಚಿವರಿಗೆ ನೀಡಲಿದ್ದಾರೆ.

ಮುಂದಿನ ದಿನದಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕವನ್ನು ಆರೋಗ್ಯ ಇಲಾಖೆ ನಡೆಸಲಿದೆ. ಔಷಧ ಮತ್ತು ಪರಿಕರಗಳನ್ನು ಆರೋಗ್ಯ ಇಲಾಖೆ ಪೂರೈಕೆ ಮಾಡಲಿದೆ.