ಸಾರಾಂಶ
ಹರಪನಹಳ್ಳಿ: ಪಟ್ಟಣದಲ್ಲಿ ಸ್ನಾತಕೋತ್ತರ ಕೇಂದ್ರ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಹರಪನಹಳ್ಳಿಯೂ ದಾವಣಗೆರೆಗೆ 40 ಕಿಮೀ ದೂರವಿದೆ. ಹರಪನಹಳ್ಳಿಯ ಸುತ್ತಮುತ್ತ ಪದವಿ ಮಹಾವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ದಾವಣಗೆರೆ ವಿವಿಗೆ ಹೋಗಬೇಕಾಗಿದೆ.ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲೂಕು ಹರಪನಹಳ್ಳಿ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸವಲತ್ತುಗಳು ಹಾಗೂ ಔದ್ಯೋಗಿಕ ಸಾಮರ್ಥ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಆರಂಭಿಸುವುದು ಅಗತ್ಯವಾಗಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.
ಈ ಕುರಿತು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಹಾಗೂ ಸಂಸದ ದೇವೇಂದ್ರಪ್ಪ ಅವರು ಇಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ಮನವಿ ಸಲ್ಲಿಸಿದ್ದು, ಕಟ್ಟಡಕ್ಕೆ ಕಂದಾಯ ಇಲಾಖೆಯವರು ಮೆಳ್ಳೆಕಟ್ಟೆ ಸರ್ವೆ ನಂ. 1ರಲ್ಲಿ ಸರ್ಕಾರಿ ಜಮೀನು 30 ಎಕರೆ ಲಭ್ಯಇರುವ ಬಗ್ಗೆ ತಿಳಿಸಿದ್ದಾರೆ.ಸದ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೋರ್ಸ್ ಆರಂಭಿಸಲು ಕಾಲೇಜಿನ ಅಭಿವೃದ್ಧಿ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಹರಪನಹಳ್ಳಿಯಲ್ಲಿ ಆರಂಭಗೊಳ್ಳುವ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ. ಇಂಗ್ಲಿಷ್, ಎಂಕಾಂ, ಎಂಎ ಅರ್ಥಶಾಸ್ತ್ರ ಅಧ್ಯಯನ ವಿಭಾಗಗಳನ್ನು ಆರಂಭಿಸಲು ನಿರ್ಣಯಿಸಲಾಗಿದೆ. ಆದ್ದರಿಂದ ಸರ್ಕಾರದಿಂದ ಅಗತ್ಯ ಭೂಮಿ, ಮೂಲ ಸೌಕರ್ಯ ಒದಗಿಸುವ ಜತೆಗೆ ಅನುದಾನ, ಹುದ್ದೆಗಳ ಮಂಜೂರಾತಿಗೆ ಅನುಮೋದನೆಗಾಗಿ ಸರ್ಕಾರಕ್ಕೆ ಕುಲಸಚಿವರು ಪ್ರಸ್ತಾವನೆ ಸಲ್ಲಿಸಿದ್ದಾರೆ.ಹೂವಿನಹಡಗಲಿಯಲ್ಲಿ ರುದ್ರಾಂಬಾ ಎಂ.ಪಿ. ಪ್ರಕಾಶ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಾದ ಎಂಎಸ್ಸಿವಿಭಾಗಗಳನ್ನು ಆರಂಭಿಸಲು ಸಹ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆದೇಶ ಮಾತ್ರ ಬಾಕಿ:ಹರಪನಹಳ್ಳಿಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಲು ನಮ್ಮ ವಿವಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಇನ್ನು ಸರ್ಕಾರದ ಆದೇಶ ಮಾತ್ರ ಬಾಕಿ ಇದೆ ಎಂದು ಶ್ರೀಕೃಷ್ಣ ದೇವರಾಯ ವಿವಿಯ ಸಿಂಡಿಕೇಟ್ ಸದಸ್ಯ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಟಿ.ಎಂ. ರಾಜಶೇಖರ ತಿಳಿಸಿದರು.