ರಸ್ತೆ ಅಗಲೀಕರಣ ಪರಿಹಾರಕ್ಕೆ ₹60 ಕೋಟಿಗೆ ಪ್ರಸ್ತಾವನೆ

| Published : Oct 31 2025, 01:45 AM IST

ಸಾರಾಂಶ

ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ರಸ್ತೆ ಮಧ್ಯೆಯಿಂದ ಎರಡೂ ಕಡೆ ೬೯ ಅಡಿಗಳವರೆಗೆ ರಸ್ತೆ ಅಗಲೀಕರಣ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಪಕ್ಕಾ ದಾಖಲಾತಿಗಳನ್ನು ಹೊಂದಿರುವ ಮಾಲೀಕರಿಗೆ ನಿಗದಿತ ಪರಿಹಾರ ನೀಡಿ, ರಸ್ತೆ ಅಗಲೀಕರಣ ಕಾಮಗಾರಿ ನಡೆಸುವುದು ಶತಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರಿನಲ್ಲಿ ಶಾಸಕ ಬಿ.ದೇವೇಂದ್ರಪ್ಪ ಹೇಳಿಕೆ । ದೇವೇಗೌಡ ಬಡಾವಣೆಯಲ್ಲಿ ಸಿ.ಸಿ. ರಸ್ತೆ, ಬಾಕ್ಸ್ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ರಸ್ತೆ ಮಧ್ಯೆಯಿಂದ ಎರಡೂ ಕಡೆ ೬೯ ಅಡಿಗಳವರೆಗೆ ರಸ್ತೆ ಅಗಲೀಕರಣ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಪಕ್ಕಾ ದಾಖಲಾತಿಗಳನ್ನು ಹೊಂದಿರುವ ಮಾಲೀಕರಿಗೆ ನಿಗದಿತ ಪರಿಹಾರ ನೀಡಿ, ರಸ್ತೆ ಅಗಲೀಕರಣ ಕಾಮಗಾರಿ ನಡೆಸುವುದು ಶತಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಗುರುವಾರ ₹1.೬೩ ಕೋಟಿ ವೆಚ್ಚದ ಸಿ.ಸಿ. ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಥಮ ಹಂತದಲ್ಲಿ ಒತ್ತುವರಿ ಆಗಿರುವ ಕಟ್ಟಡಗಳನ್ನು ತೆರವು ಮಾಡಲಾಗುವುದು. ಅನಂತರ ಪಕ್ಕಾ ದಾಖಲೆ ಇರುವಂತಹ ಮಾಲೀಕರಿಗೆ ರಸ್ತೆ ವಿಸ್ತರಣೆ ಪರಿಹಾರ ನೀಡುವ ಸಲುವಾಗಿ ಈಗಾಗಲೇ ₹60 ಕೋಟಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಅನುದಾನ ಬಂದ ಕೂಡಲೇ ಪರಿಹಾರ ನೀಡಿ, ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರು ಕೊನೆಯ ಹಂತದಲ್ಲಿ ಸಹಕಾರ ನೀಡುತ್ತಿದ್ದೀರಿ. ಈ ಮೊದಲೇ ಸಹಕಾರ ನೀಡಿದ್ದರೆ ಪಟ್ಟಣ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತಿತ್ತು. ಜಗಳೂರು ಪಟ್ಟಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ₹೮ ಕೋಟಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳ ನಡೆಸಲಾಗುತ್ತಿದೆ. ಇನ್ನೂ ₹೮ ಕೋಟಿ ಅನುದಾನ ತಂದು ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳ ನಡೆಸಲಾಗುವುದು ಎಂದರು.

ನಾನು ವಾರ್ಡ್‌ನಲ್ಲಿ ಹತ್ತು ವರ್ಷಗಳ ಕಾಲ ಜೀವನ ನಡೆಸಿದ್ದೇನೆ. ಅಶ್ವಿನಿ ಬಡಾವಣೆ ಮತ್ತು ದೇವೇಗೌಡ ಬಡಾವಣೆಯ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಹೋಗುತ್ತಿರುವಾಗ ದಾರಿಯ ಸಮಸ್ಯೆ ಉಂಟಾಗಿತ್ತು. ಇದರ ನಿವಾರಣೆಗೆ ಸೇತುವೆ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು.

ಪ.ಪಂ. ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ ಮಾತನಾಡಿ, ಶಾಸಕರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸುಂದರ ನಗರವಾಗಲಿಕ್ಕೆ ಅನುದಾನ ತಂದು ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಪ್ರತಿಯೊಬ್ಬರು ಸಹಕಾರ ನೀಡಬೇಕು. ಇಲ್ಲದಿದ್ದರೆ ಕಾಮಗಾರಿ ವಿಳಂಬವಾಗಲಿವೆ. ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಗುತ್ತಿಗೆದಾರ ಕೆಚ್ಚೇನಹಳ್ಳಿ ದೀಪಕ್ ಪಾಟೀಲ್, ಜಿ.ಪಂ. ಎಇಇ ಶಿವಮೂರ್ತಿ, ಅಭಿಯಂತರ ವಿಜಯಕುಮಾರ್ ನಾಯ್ಕ, ಪ.ಪಂ. ಸದಸ್ಯರಾದ ನಿರ್ಮಲ ಕುಮಾರಿ ಹನುಮಂತಪ್ಪ, ಲಲಿತಮ್ಮ, ಮಹಮ್ಮದ್, ಶಕೀಲ್ , ಮಂಜುನಾಥ, ದೇವರಾಜ್, ರಮೇಶ್ , ಪಿಎಸ್ ಐ ಗಾದಿಲಿಂಗಪ್ಪ, ಮುಖಂಡರಾದ ಮಹೇಶ್ವರಪ್ಪ, ಮಹಮ್ಮದ್ ಗೌಸ್, ಸಣ್ಣ ಸೂರಜ್ಜ ಮತ್ತಿತರರು ಹಾಜರಿದ್ದರು.

- - -

-30ಜೆ.ಜಿ.ಎಲ್.1.ಜೆಪಿಜಿ:

ಜಗಳೂರು ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಗುರುವಾರ ₹1.೬೩ ಕೋಟಿ ವೆಚ್ಚದ ಸಿಸಿ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಗೆ ಶಾಸಕ ಬಿ.ದೇವೇಂದ್ರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.