ಸೀ ಅ್ಯಂಬ್ಯುಲೆನ್ಸ್ ಗೆ ಪ್ರಸ್ತಾಪ ಸಲ್ಲಿಸಲಾಗಿದೆ: ಕ.ಕಾ.ಪಡೆ ಎಸ್ಪಿ ಮಿಥುನ್

| Published : Jul 08 2024, 12:32 AM IST

ಸೀ ಅ್ಯಂಬ್ಯುಲೆನ್ಸ್ ಗೆ ಪ್ರಸ್ತಾಪ ಸಲ್ಲಿಸಲಾಗಿದೆ: ಕ.ಕಾ.ಪಡೆ ಎಸ್ಪಿ ಮಿಥುನ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಳದ ಶ್ರೀ ಹನುಮಾನ್ ವಿಠೋಭಾ ಭಜನಾ ಮಂದಿರದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 76ನೇ ತಂಡದ ವಿವಿಧ ರಾಜ್ಯಗಳ 28 ಮಂದಿ ಐಪಿಎಸ್ ಪ್ರೊಬೆಷನರಿ ಅಧಿಕಾರಿಗಳ ಮತ್ತು ಮೀನುಗಾರ ಮುಖಂಡರೊಂದಿಗೆ ಸಂವಾದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಕೊಳದ ಶ್ರೀ ಹನುಮಾನ್ ವಿಠೋಭಾ ಭಜನಾ ಮಂದಿರದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 76ನೇ ತಂಡದ ವಿವಿಧ ರಾಜ್ಯಗಳ 28 ಮಂದಿ ಐಪಿಎಸ್ ಪ್ರೊಬೆಷನರಿ ಅಧಿಕಾರಿಗಳ ಮತ್ತು ಮೀನುಗಾರ ಮುಖಂಡರೊಂದಿಗೆ ಸಂವಾದ ಸಭೆ ಶನಿವಾರ ನಡೆಯಿತು.

ಕರಾವಳಿ ಕಾವಲು ಪಡೆಯ ಅಧೀಕ್ಷಕ ಮಿಥುನ್ ಎಚ್.ಎನ್. ಹಾಗೂ ಕಾರ್ಕಳದ ನಕ್ಸಲ್ ನಿಗ್ರಹ ಪಡೆಯ ಅಧೀಕ್ಷಕ ಜಿತೇಂದ್ರ ದಯಾಮ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಶ್ರೀ ಹನುಮಾನ್ ವಿಠೋಭಾ ಭಜನಾ ಮಂದಿರ ಕೊಳ ಇದರ ಮಹಿಳಾ ಮಂಡಳಿಯ ಸದಸ್ಯರು, ಸುಮಾರು 45- 50 ಮಂದಿ ಮೀನುಗಾರಿಕಾ ವೃತ್ತಿದಾರರು ವಿಚಾರ ವಿನಿಮಯದಲ್ಲಿ ಭಾಗವಹಿಸಿದರು.

ಮೀನುಗಾರ ಮುಖಂಡರಾದ ಶಶಿ ಬಂಗೇರ ಅವರು ಮಾತನಾಡಿ, ಸಮುದ್ರದಲ್ಲಿ ಮೀನುಗಾರಿಕೆ ಸಂದರ್ಭದಲ್ಲಿ ಅವಘಢ ಸಂಭವಿಸಿದಾಗ ಕ್ಷಿಪ್ರ ರಕ್ಷಣಾ ಕಾರ್ಯಚರಣೆಗೆ ಸೀ ಅಂಬುಲೆನ್ಸ್ ಅವಶ್ಯಕತೆ ಬಗ್ಗೆ ಗಮನ ಸೆಳೆದರು. ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಎಸ್ಪಿ ಮಿಥುನ್ ಹೇಳಿದರು.

ಮಹಾಬಲ ಅವರು ಸಮುದ್ರ ಮಧ್ಯೆ ಮೀನುಗಾರಿಕಾ ಬೋಟಿಗೆ ಅಥವಾ ಮೀನುಗಾರರಿಗೆ ಅವಘಢವಾದಾಗ ಸಮೀಪದ ಬೇರೆ ರಾಜ್ಯಗಳ ಬಂದರಿಗೆ ತೆರಳಲು ಅನುಮತಿ ಇಲ್ಲ. ಇದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಅವರು, ಇತರ ರಾಜ್ಯದ ಬಂದರುಗಳಿಗೆ ತೆರಳಲು ಅನುಮತಿ ಬೇಕಾಗಿಲ್ಲ, ಇದು ಮಾಹಿತಿ ಕೊರತೆ ಎಂದರು.

ರವಿ ಅವರು ಮೀನುಗಾರರ ಮಕ್ಕಳಿಗೆ ಐಎಎಸ್/ಐಪಿಎಸ್ ಹಾಗೂ ಇನ್ನಿತರ ಉನ್ನತ ಹುದ್ದೆಗಳ ಪರೀಕ್ಷೆಯ ಬಗ್ಗೆ ಕಾರ್ಯಾಗಾರವನ್ನು ನಡೆಸುವಂತೆ ಕೋರಿದರು. ಇದಕ್ಕೆ ಅಧಿಕಾರಿಗಳು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಗುಪ್ತವಾರ್ತಾ ವಿಭಾಗದ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿದರು, ಕ.ಕಾ.ಪಡೆಯ ನಿರೀಕ್ಷಕ ಸಂಪತ್ ಕುಮಾರ್ ಮತ್ತು ಇತರ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.