ಮಿಶ್ರಿಕೋಟಿಯಲ್ಲಿ ನಾಡಕಚೇರಿಗೆ ಸರ್ಕಾರಕ್ಕೆ ಪ್ರಸ್ತಾವನೆ

| Published : Jan 08 2024, 01:45 AM IST

ಮಿಶ್ರಿಕೋಟಿಯಲ್ಲಿ ನಾಡಕಚೇರಿಗೆ ಸರ್ಕಾರಕ್ಕೆ ಪ್ರಸ್ತಾವನೆ
Share this Article
  • FB
  • TW
  • Linkdin
  • Email

ಸಾರಾಂಶ

ಆದ್ದರಿಂದ ಮಿಶ್ರಿಕೋಟಿ ಗ್ರಾಮದಲ್ಲೇ ನಾಡಕಚೇರಿ ಕಾರ್ಯಾಲಯ ತೆರೆದರೆ ಸುತ್ತಮುತ್ತಲಿನ ಜನರಿಗೆ ಸಹಾಯ ಆಗಲಿದೆ ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಸಚಿವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಭರವಸೆ ನೀಡಿದ್ದಾರೆ.

ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಚಿವ ಲಾಡ್ ಭರವಸೆಕನ್ನಡಪ್ರಭ ವಾರ್ತೆ ಕಲಘಟಗಿ

ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಎನಿಸಿರುವ ಮಿಶ್ರಿಕೋಟಿ ಹಾಗೂ ಅದರ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಅನುಕೂಲವಾಗಲೆಂದು ಮಿಶ್ರಿಕೋಟಿಯಲ್ಲಿ ಹೊಸ ನಾಡಕಚೇರಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡುತ್ತೇನೆ ಎಂದು ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.

ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ನಾಗರಿಕರಿಂದ ಬಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಮಿಶ್ರಿಕೋಟಿ ಗ್ರಾಮದ ಜನರಿಗೆ ದುಮ್ಮವಾಡ ನಾಡಕಚೇರಿಗೆ ಹೋಗಿ ಬರಲು ತುಂಬ ಅನನುಕೂಲವಾಗುತ್ತಿದೆ. ಆದ್ದರಿಂದ ಮಿಶ್ರಿಕೋಟಿ ಗ್ರಾಮದಲ್ಲೇ ನಾಡಕಚೇರಿ ಕಾರ್ಯಾಲಯ ತೆರೆದರೆ ಸುತ್ತಮುತ್ತಲಿನ ಜನರಿಗೆ ಸಹಾಯ ಆಗಲಿದೆ ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಸಚಿವರು ಸೂಕ್ತ ಸ್ಪಂದನೆ ನೀಡಿದರು.

ಪ್ರಮಾಣ ಪತ್ರಕ್ಕಾಗಿ ಪರದಾಟ:

ಜಾತಿ ಸೇರಿದಂತೆ ವಿವಿಧ ಸೌಲಭ್ಯ ಪಡೆಯುವ ಪ್ರಮಾಣ ಪತ್ರಕ್ಕಾಗಿ ಜನರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅರ್ಜಿ ತಿರಸ್ಕಾರ ಎಂದು ತೋರಿಸಲಾಗುತ್ತದೆ. ಅದೇ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸಿದರೆ ಒಂದು ವಾರದಲ್ಲಿ ಪ್ರಮಾಣ ಪತ್ರ ಸಿಗುತ್ತದೆ. ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದುಡ್ಡು ಇಲ್ಲದೇ ಯಾವುದೇ ಕೆಲಸವಾಗುತ್ತಿಲ್ಲ ಎಂದು ನಾಗರಿಕರು ಗಂಭೀರ ಆರೋಪ ಮಾಡಿದರು.

ಸಚಿವ ಲಾಡ್ ಮಾತನಾಡಿ, ಅಧಿಕಾರಿಗಳು ಜನರಿಂದ ಒಂದೇ ಒಂದು ರುಪಾಯಿ ಲಂಚ ಪಡೆದರೆ ನನ್ನ ಗಮನಕ್ಕೆ ತನ್ನಿ. ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರುದ್ರಭೂಮಿಗೆ ಬೇಡಿಕೆ:

ಮಿಶ್ರಿಕೋಟಿ ಪಪಂ ಆಗುವಷ್ಟು ವಿಸ್ತಾರವಾಗಿದೆ. ಹೀಗಿದ್ದರೂ ಇಲ್ಲಿನ ಜನರು ಶವಸಂಸ್ಕಾರಕ್ಕಾಗಿ ಪರದಾಡುವಂತಾಗಿದೆ. ಮೊದಲಿನಿಂದಲೂ ಗ್ರಾಮದ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿದಿಲ್ಲ. ಮೂರು ವರ್ಷದ ಹಿಂದೆ ಅದೇ ಭೂಮಿಯನ್ನು ಬೇರೆಯೊಬ್ಬರು ಖರೀದಿಸಿದ್ದು, ಮತ್ತೆ ಸಮಸ್ಯೆ ಉಲ್ಬಣಿಸಿದೆ. ನಮ್ಮ ಗ್ರಾಮಕ್ಕೆ ಸ್ಮಶಾನಭೂಮಿ ಒದಗಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮದ ಜನರು ಒಕ್ಕೂರಲಿನಿಂದ ಆಗ್ರಹಿಸಿದರು.

ಗ್ರಾಮಸ್ಥರ ಬೇಡಿಕೆ ಆಲಿಸಿದ ಸಚಿವ ಲಾಡ್, ಸ್ಮಶಾನ ಭೂಮಿ ಖರೀದಿಸಿರುವ ವ್ಯಕ್ತಿಯ ಜತೆ ಎಲ್ಲರೂ ಕುಳಿತು ಮಾತನಾಡಿ ಮನವೊಲಿಸಿ. ಬೇಕಾದರೆ ನಾನೂ ನಿಮ್ಮ ಜತೆ ಬಂದು ಗ್ರಾಮಸ್ಥರ ಪರವಾಗಿ ಮನವಿ ಮಾಡುವೆ ಎಂದರು. ಇಷ್ಟಕ್ಕೆ ಸುಮ್ಮನಾಗದ ಜನರು, ಸ್ಮಶಾನ ಭೂಮಿ ದಾಖಲೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ತಹಸೀಲ್ದಾರ್ ಕಚೇರಿಯಲ್ಲಿ ಜನಕ್ಕೆ ಬೇಕಾಗಿದ್ದು ಕೆಲಸ ಮಾಡಲ್ಲ, ಜನಕ್ಕೆ ಬೇಡವಾದ ಕೆಲಸ ಬೇಗ ಮಾಡ್ತಾರೆ. ಬದುಕಿದ್ದವರು ಸತ್ತವರು ಎಂದು ಸರ್ಟಿಫಿಕೆಟ್ ಕೊಟ್ಟ ಉದಾಹರಣೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ 7-8ನೇ ವಾರ್ಡಿನಲ್ಲಿ ವ್ಯಾಪಕ ನೀರಿನ ಸಮಸ್ಯೆ ಉಲ್ಬಣಿಸಿದೆ. ಕುಡಿಯುವ ನೀರು ಒದಗಿಸಬೇಕು ಎಂದು ಜನರು ಆಗ್ರಹಿಸಿದರು.

ಜೆಜೆಎಂ ಅಧಿಕಾರಿ ಶಿವಪುತ್ರಪ್ಪ ಮಠಪತಿ ಮಾತನಾಡಿ, ವಾಟರ್ ಲೆವಲ್ ಕಡಿಮೆ ಆಗಿರುವುದರಿಂದ ನೀರಿನ ಸಮಸ್ಯೆ ಆಗಿದೆ. ಮತ್ತೆರೆಡು ಕೊಳವೆಬಾವಿ ಕೊರೆಯಿಸಿ ನೀರು ಸರಬರಾಜು ಮಾಡಲಾಗುವುದು ಎಂದಾಗ, ಸಚಿವರು ಮಾತನಾಡಿ, ಅವಶ್ಯವಿದ್ದರೆ ಜನರಿಗೆ ತೊಂದರೆ ಆಗದಂತೆ ಟ್ಯಾಂಕರ್ ನೀರು ಪೂರೈಸಲು ಸೂಚಿಸಿದರು.

ಕಳಪೆ ಬೀಜ ವಿತರಣೆ:

ದುಮ್ಮವಾಡ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಬೀಜ ಒದಗಿಸಿದ್ದಾರೆ. ಈ ಸಲ ನೀಡಿದ ತಾಡಪತ್ರಿಗಳೂ ಸರಿಯಿಲ್ಲ. ನೀರಾವರಿ ಪೈಪ್‌ಗಳು ಕಳಪೆಯಿಂದ ಕೂಡಿವೆ. ಅಲ್ಲದೇ ಮಿಶ್ರಿಕೋಟಿಯಲ್ಲಿ ರೈತ ಸಂಪರ್ಕ ಕೇಂದ್ರ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದರು. ಸಚಿವರು ಪೈಪ್ ಏಜೆನ್ಸಿ ಪಡೆದವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಪರಾಮರ್ಶಿಸಿ ರೈತ ಸಂಪರ್ಕ ಕೇಂದ್ರ ಆರಂಭಿಸುವ ಕುರಿತು ಚಿಂತಿಸಲಾಗುವುದು ಎಂದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಸಮಸ್ಯೆ, 108 ಆ್ಯಂಬುಲೆನ್ಸ್‌ ಸಮಸ್ಯೆ, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಜನತೆ ಮನವಿ ಮಾಡಿದರು. ನರೇಗಾ ಕಾರ್ಡ್‌ ಇದ್ದವರಿಗೆ ಕೆಲಸ ಕೊಡುವ ಬಗ್ಗೆ ಅಹವಾಲು ಕೇಳಿಬಂದವು. ಮಿಶ್ರಿಕೋಟಿ ಪ್ಯಾಟಿ ಬಸವಣ್ಣ ದೇವಸ್ಥಾನದ ರಸ್ತೆ ಅಗಲೀಕರಣ ಮಾಡಲು ಮನವಿ ಮಾಡಿದರು.

ಮಿಶ್ರಿಕೋಟಿ ಗ್ರಾಮಕ್ಕೆ ದೊಡ್ಡ ಬಸ್ ನಿಲ್ದಾಣವಿದ್ದರೂ ಬಸ್‌ಗಳು ಒಳಗೆ ಬರುವುದಿಲ್ಲ. ಅಕ್ಕಪಕ್ಕದ ಗ್ರಾಮದ ಮಕ್ಕಳು ಮಿಶ್ರಿಕೋಟಿಗೆ ಕಲಿಯಲು ಬರುತ್ತಾರೆ. ಅವರಿಗೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು. ಹೊಸ ಪ್ರೌಢಶಾಲೆ, ಡಿಗ್ರಿ ಕಾಲೇಜು, ಉರ್ದು ಪ್ರೌಢಶಾಲೆಗೆ ಮನವಿ ಕೇಳಿಬಂದವು.

ಈ ವೇಳೆ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಪಂ ಇಒ ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ ಕೌಜಲಗಿ, ಗ್ರಾಪಂ ಅಧ್ಯಕ್ಷ ಹನುಮಂತಗೌಡ ಪಾಟೀಲ, ಉಪಾಧ್ಯಕ್ಷೆ ರುಸ್ತುಂಬಿ ದುಖಾನದಾರ್, ಪಿಡಿಒ ಗುರುನಾಥ ರಾಯನಾಳ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ನರೇಶ ಮಲೆನಾಡು, ಹರೀಶ ಮಠದ, ಸೋಮಶೇಖರ ಬೆನ್ನೂರು ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಇದ್ದರು.