ರಾಂ ಅಜೆಕಾರು ಕಾರ್ಕಳ: ಮತದಾನ ಪ್ರಕ್ರಿಯೆ ಮತ್ತಷ್ಟು ಸುಲಭ, ವೇಗ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 131 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಈಗಿರುವ 1,112 ಮತಗಟ್ಟೆಗಳ ಸಂಖ್ಯೆ 1,243ಕ್ಕೆ ಏರಿಕೆಯಾಗಲಿದೆ. 1,200ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ಗುರುತಿಸಿ, ಹೊಸ ಮತಗಟ್ಟೆಗಳ ಸ್ಥಾಪನೆ ಹಾಗೂ ಮತಗಟ್ಟೆಗಳ ಪುನರ್ವಿಂಗಡಣೆ ಕುರಿತು ಕರಡು ಪ್ರಸ್ತಾವ ಸಿದ್ಧಪಡಿಸಲಾಗಿದ್ದು, ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ.ಮತಗಟ್ಟೆಗಳ ಸಂಖ್ಯೆ ಹೆಚ್ಚುವುದರಿಂದ ಇದರ ನೇರ ಪ್ರಯೋಜನ ಮತದಾರರಿಗೆ ದೊರೆಯಲಿದೆ. ಒಂದೇ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಸೇರುವ ಪರಿಸ್ಥಿತಿ ಕಡಿಮೆಯಾಗುವುದರಿಂದ ಮತದಾನದ ದಿನ ಉದ್ದನೆಯ ಸರತಿ ಸಾಲು, ಜನದಟ್ಟಣೆ ಮತ್ತು ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ತಪ್ಪಲಿದೆ. ಪ್ರತಿ ಮತಗಟ್ಟೆಗೆ ಕಡಿಮೆ ಸಂಖ್ಯೆಯ ಮತದಾರರನ್ನು ಹಂಚಿಕೆ ಮಾಡುವುದರಿಂದ ಮತದಾನ ಪ್ರಕ್ರಿಯೆಗೆ ವೇಗ ದೊರೆಯಲಿದೆ.ವಿಶೇಷವಾಗಿ ಗ್ರಾಮೀಣ, ಗುಡ್ಡಗಾಡು ಹಾಗೂ ದೂರದ ಪ್ರದೇಶಗಳ ಮತದಾರರಿಗೆ ಹೊಸ ಮತಗಟ್ಟೆಗಳು ಹೆಚ್ಚಿನ ಅನುಕೂಲ ಕಲ್ಪಿಸಲಿವೆ. ಈ ವ್ಯವಸ್ಥೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾದ ಬಿಎಲ್‌ಒಗಳ ನೇಮಕ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ಮತಗಟ್ಟೆಗೆ ಸೂಕ್ತ ಬಿಎಲ್‌ಒ ನಿಯೋಜನೆಯಾದರೆ ಮತದಾರರೊಂದಿಗೆ ನೇರ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ತಿದ್ದುಪಡಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಗುರುತಿಸಿ ಪರಿಹರಿಸುವ ಕಾರ್ಯಕ್ಕೆ ವೇಗ ದೊರೆಯಲಿದೆ.ಬಿಎಲ್‌ಒ ಮೇಲಿನ ಒತ್ತಡ ನಿವಾರಣೆ: ಹೆಚ್ಚಿನ ಸಂಖ್ಯೆಯ ಮತದಾರರನ್ನು ಒಬ್ಬನೇ ಬಿಎಲ್‌ಒ ನಿರ್ವಹಿಸುವ ಒತ್ತಡವೂ ಕಡಿಮೆಯಾಗಲಿದೆ. ಮತದಾರರ ಸಂಖ್ಯೆ ಹಂಚಿಕೆಯಾಗುವುದರಿಂದ ಬಿಎಲ್‌ಒಗಳು ಮತದಾರರ ಪಟ್ಟಿಯ ಪರಿಶೀಲನೆ, ಮನೆಮನೆಗೆ ಮಾಹಿತಿ ಸಂಗ್ರಹ, ಅರ್ಹ ಮತದಾರರ ಸೇರ್ಪಡೆ ಹಾಗೂ ಚುನಾವಣಾ ಜಾಗೃತಿ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗಲಿದೆ.
ನಿರ್ವಹಣೆ ಸುಲಭ: ಮತದಾನದ ದಿನವೂ ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿರುವ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗೆ ಜನಸಂದಣಿ ನಿರ್ವಹಿಸುವುದು ಸುಲಭವಾಗಲಿದೆ. ಸರತಿ ಸಾಲು ಕಡಿಮೆಯಾಗುವುದರಿಂದ ಮತದಾನ ತ್ವರಿತವಾಗಿ ನಡೆಯಲಿದ್ದು, ಒಟ್ಟಾರೆ ಚುನಾವಣಾ ಪ್ರಕ್ರಿಯೆಗೆ ವೇಗ ಸಿಗಲಿದೆ.ಕ್ಷೇತ್ರವಾರು ಬೈಂದೂರಿನಲ್ಲಿ 246ರಿಂದ 294ಕ್ಕೆ, ಕುಂದಾಪುರದಲ್ಲಿ 222ರಿಂದ 238ಕ್ಕೆ, ಉಡುಪಿಯಲ್ಲಿ 226ರಿಂದ 246ಕ್ಕೆ, ಕಾಪುವಿನಲ್ಲಿ 209ರಿಂದ 231ಕ್ಕೆ ಹಾಗೂ ಕಾರ್ಕಳದಲ್ಲಿ 209ರಿಂದ 234ಕ್ಕೆ ಮತಗಟ್ಟೆಗಳ ಸಂಖ್ಯೆ ಏರಲಿದೆ. ಒಟ್ಟಾರೆ 131 ಹೊಸ ಮತಗಟ್ಟೆಗಳ ಸೇರ್ಪಡೆಯಿಂದ ಜಿಲ್ಲೆಯ ಚುನಾವಣಾ ವ್ಯವಸ್ಥೆ ಮತ್ತಷ್ಟು ವಿಕೇಂದ್ರೀಕೃತವಾಗಲಿದೆ.ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 131 ಮತಗಟ್ಟೆಗಳ ಹೆಚ್ಚಳವಾಗಲಿದ್ದು, ಇದರಿಂದ ಜಿಲ್ಲೆಯಲ್ಲಿರುವ ಮತ ಗಟ್ಟೆಗಳ ಸಂಖ್ಯೆ 1112ರಿಂದ 1243ಕ್ಕೇರಲಿದೆ. -ಸ್ವರೂಪ ಟಿ.ಕೆ. ಜಿಲ್ಲಾಧಿಕಾರಿ ಉಡುಪಿ.