ಸಾರಾಂಶ
ಜಮಖಂಡಿ ನಗರದ ಮುಧೋಳ ಬೈಪಾಸ್ ರಸ್ತೆ, ನೂತನ ವಿದ್ಯಾಲಯದ ಬಳಿ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಮುಧೋಳ ಬೈಪಾಸ್ ರಸ್ತೆ, ನೂತನ ವಿದ್ಯಾಲಯದ ಬಳಿ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ಕೆರೆಯಂತೆ ಗೋಚರಿಸುವ ಬೈಪಾಸ್ ರಸ್ತೆ ತಲೆಬರಹದಡಿ ಸೋಮವಾರ ಕನ್ನಡಪ್ರಭದಲ್ಲಿ ಬೈಪಾಸ್ ರಸ್ತೆಯಲ್ಲಿ ನೀರು ನಿಂತು ಜನರಿಗೆ ಆಗುತ್ತಿರುವ ತೊಂದರೆಯ ಕುರಿತು ವಿಶೇಷ ವರದಿ ಪ್ರಕಟಿಸಿತ್ತು.ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಗರಕ್ಕೆ ಮಳೆ ಹಾನಿಯ ವೀಕ್ಷಣೆಗೆ ಆಗಮಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಮಿಟಿಗೇಷನ್ ಫಂಡ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮೌಖಿಕ ಆದೇಶ ನೀಡಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಸಂಗ್ರಹವಾಗದಂತೆ ಕ್ರಮ ಜರುಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ನಗರಸಭೆಯ ಪೌರಾಯುಕ್ತರು ಕ್ರೀಯಾಯೋಜನೆ ಸಿದ್ಧಪಡಿಸಿದ್ದರು. ಕಾಮಗಾರಿಗೆ ಯಾವುದೇ ಟೆಂಡರ್ ಆಗಿಲ್ಲ ಎಂದು ವಿವರಣೆ ನೀಡಿದರು.
ಈಗಿನ ಜಿಲ್ಲಾಧಿಕಾರಿಗಳು ನಗರಸಭೆ, ಪಿಡಬ್ಲುಡಿ, ಪಿಆರ್‌ಡಿ ಮೂರು ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಮೂರು ಇಲಾಖೆಯ ಆಧಿಕಾರಿಗಳಿಗೆ ಕ್ರೀಯಾಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ. ಕಾಮಗಾರಿಯ ಗುಣಮಟ್ಟ ಹಾಗೂ ತಗಲುವ ವೆಚ್ಚ ಮುಂತಾದವನ್ನು ಪರಿಶೀಲಿಸಿ ಮುಂದಿನ ಎರಡು ಮೂರು ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ಹೇಳಿದರು. ಪ್ರಸ್ತಾವನೆಯ ಅನುಮೋದನೆಯಾದ ನಂತರ ಆದಷ್ಟು ಬೇಗನೇ ಕಾಮಗಾರಿ ಪ್ರಾರಂಭಿಸಲಾಗುವದು, ಅಕ್ಟೋಬರ್‌ನಲ್ಲಿ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.