ಸಲಹೆಗಳಿಗಿಂತ ಸಮಸ್ಯೆಗಳ ಪ್ರಸ್ತಾಪ

| Published : Jan 04 2024, 01:45 AM IST

ಸಾರಾಂಶ

ಬಜೆಟ್‌ಗೆ ಪೂರಕ ಸಲಹೆ ನೀಡುವಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಗರಸಭಾ ಸದಸ್ಯರಿಗೆ ತಿಳಿಸಲಾಗಿತ್ತು. ಆದರೆ ಎಲ್ಲರೂ ಅದಕ್ಕೆ ಒತ್ತು ನೀಡುವ ಬದಲು ಸಮಸ್ಯೆಗಳ ಪ್ರಸ್ತಾಪಕ್ಕೆ ಬಹುಪಾಲು ಸಮಯ ವ್ಯರ್ಥ ಮಾಡಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸ್ಥಳೀಯ ನಗರಸಭೆ 2024-25ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಬುಧವಾರ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಅಧ್ಯಕ್ಷತೆಯಲ್ಲಿ ಜರುಗಿತು.

ಬಜೆಟ್‌ಗೆ ಪೂರಕ ಸಲಹೆ ನೀಡುವಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಗರಸಭಾ ಸದಸ್ಯರಿಗೆ ತಿಳಿಸಲಾಗಿತ್ತು. ಆದರೆ ಎಲ್ಲರೂ ಅದಕ್ಕೆ ಒತ್ತು ನೀಡುವ ಬದಲು ಸಮಸ್ಯೆಗಳ ಪ್ರಸ್ತಾಪಕ್ಕೆ ಬಹುಪಾಲು ಸಮಯ ವ್ಯರ್ಥ ಮಾಡಿದರು.

ಮುಖ್ಯ ಲೆಕ್ಕಾಧಿಕಾರಿ ವಾಣಿಶ್ರೀ ಮಾತನಾಡಿ, ನಗರಸಭೆಯ ಆಯವ್ಯಯ ಸಿದ್ಧತೆಗಾಗಿ ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಸಾರ್ವಜನಿಕರು ಸಲಹೆ ಸೂಚನೆಗಳನ್ನು ಪ್ರಸ್ತಾಪಿಸುವಂತೆ ಕೋರಿದರು.

ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ನಗರಸಭೆಗೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದರೂ ಇಲ್ಲಿಗೆ ಒಂದು ಬಾರಿ ಭೇಟಿ ನೀಡಿಲ್ಲ. ಹಾವೇರಿ ನಗರಸಭೆಯ ಸಭೆಗಳಲ್ಲಿ ಎರಡು ಬಾರಿ ಅವರು ಹಾಜರಿದ್ದರು. ನಮ್ಮಲ್ಲಿಗೆ ಏಕೆ ಬರುತ್ತಿಲ್ಲ ಎಂಬುದು ತಿಳಿಯದಾಗಿದೆ. ನಗರದಲ್ಲಿ ಪಟಾಕಿ ದುರ್ಘಟನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ನಗರಕ್ಕೆ ಭೇಟಿ ನೀಡಿದರೂ ಆ ಭಾಗದ ಸದಸ್ಯರ ಜೊತೆ ಸಭೆ ಕರೆದಿಲ್ಲ. ನಗರ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಇದೇ ರೀತಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅವರ ಉಪಸ್ಥಿತಿ ಅವಶ್ಯವಾಗಿದೆ. ಬೇಕಾದರೆ ಅವರ ಬರುವಿಕೆಗಾಗಿ ನಾವು ಕಾಯಲು ಸಿದ್ಧ ಎಂದರು.

ಇದಕ್ಕೆ ಗಂಗಮ್ಮ ಹಾವನೂರ, ನೂರುಲ್ಲಾಖಾಜಿ, ಸಿದ್ದಪ್ಪ ಬಾಗಿಲದವರ ಸೇರಿದಂತೆ ಹಲವಾರು ನಗರಸಭಾ ಸದಸ್ಯರು ಧನಿಗೂಡಿಸಿದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ಜಿಲ್ಲಾಧಿಕಾರಿಗಳು ಬಜೆಟ್ ಮಂಡನೆಗೆ ಬರುವುದಾಗಿ ತಿಳಿಸಿದ್ದಾರೆ ಎಂದರು.

ನಗರಸಭಾ ಸದಸ್ಯ ರಮೇಶ ಕರಡೆಣ್ಣನವರ ಮಾತನಾಡಿ, ಸಿಬ್ಬಂದಿ ಸದಸ್ಯರಿಗೆ ಸ್ಪಂದಿಸುತ್ತಿಲ್ಲ. ನಮ್ಮ ಮತದಾರರಿಗೆ ನಾವು ಏನು ಉತ್ತರ ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ನಿಮ್ಮ (ಪೌರಾಯುಕ್ತರ) ಗಮನಕ್ಕೆ ಸಮಸ್ಯೆ ತಂದರೂ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಒಂದು ವರ್ಷದಿಂದ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಬೇಕಾದರೆ ನಮ್ಮನ್ನು ಹೊರಕ್ಕೆ ಕಳಿಸಿ ಸಭೆ ನಡೆಸಿ ಎಂದರು.

ಹೀಗಾಗಿ ಒಂದು ಹಂತದಲ್ಲಿ ಸಭೆಯಲ್ಲಿ ಏನಾಗುತ್ತಿದೆ, ಯಾವುದಕ್ಕೆ ಸಭೆ ಕರೆಯಲಾಗಿದೆ ಎಂಬುದೇ ತಿಳಿಯದಾಗಿತ್ತು. ಆಗ ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಇದು ಬಜೆಟ್ ಸಭೆಯಾಗಿದ್ದು ದಯವಿಟ್ಟು ಬಜೆಟ್‌ಗೆ ಸಂಬಂಧಿಸಿದ ಸಲಹೆಗಳನ್ನು ಮಾತ್ರ ನೀಡಿ ಎಂದು ಮನವಿ ಮಾಡಿದರು.

ನಗರಸಭಾ ಸದಸ್ಯ ಹಬಿಬುಲ್ಲಾ ಕಂಬಳಿ ಮಾತನಾಡಿ, ಕಳೆದ ವರ್ಷದ ಬಜೆಟ್‌ನಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ಯಾವುದೇ ಸಲಹೆಗಳು ಜಾರಿಗೆ ಬಂದಿಲ್ಲ. ಇನ್ನು ಬಜೆಟ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳ ಸಲುವಾಗಿ ಫುಡ್ ಪಾರ್ಕ್ ನಿರ್ಮಾಣ, ನಗರವನ್ನು ಹಸಿರೀಕರಣ ಮಾಡಲು ಸಸಿಗಳನ್ನು ನೆಡುವುದಾಗಿ ತಿಳಿಸಲಾಗಿತ್ತು. ಆದರೆ ಅವು ಯಾವುದೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ದೂರಿದರು.

ವರ್ತಕರ ಸಂಘದ ಕಾರ್ಯದರ್ಶಿ ಗುರುಪ್ರಕಾಶ ಜಂಬಗಿ ಮಾತನಾಡಿ, ಇ ಸ್ವತ್ತು ಪಡೆಯಲು ತೊಂದರೆಯಾಗಿದೆ. ನಗರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪ್ರತಿ ವರ್ಷ ಹೆಚ್ಚಳ ಮಾಡುವುದೇ ಬೇಡ. ಎಪಿಎಂಸಿ ಆವರಣದಲ್ಲಿ ಎಪಿಎಂಸಿ ವತಿಯಿಂದಲೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ ಹಾಗೂ ಸ್ವಚ್ಛತೆಯನ್ನು ಕೂಡ ಮಾಡಲಾಗುತ್ತದೆ. ಆದ್ದರಿಂದ ಅಲ್ಲಿನ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ಕೊಡಬೇಕು ಎಂದರು

ಡಾ. ಗಿರೀಶ ಕೆಂಚಪ್ಪನವರ ಮಾತನಾಡಿ, ನಗರಸಭೆ ವತಿಯಿಂದ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಇನ್ಸಿನೆರಟರ್‌ ವ್ಯವಸ್ಥೆ ಮಾಡಬೇಕು. ನಗರದ ಬಸ್‌ನಿಲ್ದಾಣದ ಬಳಿಯಿಂದ ರೇಲ್ವೆ ನಿಲ್ದಾಣದವರೆಗೆ ಬಸ್ ತಂಗುದಾಣಗಳನ್ನು ಹಾಗೂ ಮೂತ್ರಿಖಾನೆಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಡಾ. ಎಸ್.ಎಲ್. ಪವಾರ ಮಾತನಾಡಿ, ಮುಂದಿನ ಬಜೆಟ್‌ನಲ್ಲಿ ರಸ್ತೆಗಳ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಿ. ಬೀದಿ ಬದಿ ವರ್ತಕರಿಗೆ ಪ್ರತ್ಯೇಕ ಜಾಗ ಒದಗಿಸಿ. ನಗರಸಭೆ ಪ್ರೌಢಶಾಲೆ ಶಿಥಿಲಾವಸ್ಥೆ ತಲುಪಿದ್ದು ಹೊಸ ಕಟ್ಟಡ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಿ. ನಗರದ ವಿವಿದ ಭಾಗಗಳಲ್ಲಿ ಏಕಮುಖ ರಸ್ತೆ ವ್ಯವಸ್ಥೆ, ಸಿಸಿ ಟಿವಿ ಅಳವಡಿಸಲು ಹಣ ತೆಗೆದಿಡಿ ಎಂದರು.

ಕನಸಿನ ರಾಣಿಬೆನ್ನೂರು ತಂಡದ ಡಾ. ನಾರಾಯಣ ಪವಾರ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಕೆಲವು ಸಲಹೆ ನೀಡಿದರು.