ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಇದುವರೆಗೆ ಗುಡ್ಡ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಗೇರು ಬೆಳೆ ಈಗ ಮನೆಗಳ ಟೇರೇಸ್‌ನಲ್ಲೂ ಸಮೃದ್ಧ ಫಸಲು ತೆಗೆಯಬಹುದು. ಅಡಕೆ, ತೆಗು, ಮಾವು ಬಳಿಕ ಈಗ ಗೇರು ಕೃಷಿಯಲ್ಲೂ ಕುಬ್ದ ತಳಿ ಆವಿಷ್ಕಾರಗೊಂಡಿದೆ.
ದೇಶದಲ್ಲೇ ಮೊದಲ ಬಾರಿಗೆ ಗೇರು ತಳಿಗಳಲ್ಲಿ ಕುಬ್ಜ ತಳಿಗಳನ್ನು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ(ಡಿಸಿಆರ್) ಅಭಿವೃದ್ಧಿಪಡಿಸಿದೆ. ಈ ಮೂಲಕ ದೇಶದಲ್ಲಿ ಕುಬ್ಜ ಗೇರು ತಳಿಯ ಕೊರತೆಯನ್ನು ನೀಗಿಸಿದೆ. ಈ ಕುಬ್ಜ ಗೇರು ತಳಿಗೆ ‘ನೇತ್ರಾ ವಾಮನ್’ ಎಂದು ಹೆಸರು ಇರಿಸಲಾಗಿದೆ. ನೇತ್ರಾ ಎಂದರೆ ಕರಾವಳಿಯ ಜೀವನದಿ ನೇತ್ರಾವತಿ. ಕುಬ್ಜ ತಳಿಯಾದ್ದರಿಂದ ವಾಮನ್ ಎಂದು ಹೆಸರಿಸಲಾಗಿದೆ. ವಾಮನ ತಳಿ ಇದು: ಇತರೆ ಗೇರು ಮರಗಳಂತೆ ಇದು ಎತ್ತರಕ್ಕೆ ಬೆಳೆಯುವುದಿಲ್ಲ. ಕೇವಲ 2.5 ಮೀಟರ್ ಅಷ್ಟೇ ಎತ್ತರಕ್ಕೆ ಬೆಳೆಯುತ್ತದೆ. ಸುಮಾರು 10 ವರ್ಷಗಳಿಂದ ಪರೀಕ್ಷೆ ನಡೆಸಿ ಈ ಕುಬ್ಜ ತಳಿಯನ್ನು ಡಿಸಿಆರ್ ಅಭಿವೃದ್ಧಿಪಡಿಸಿ ಯಶಸ್ಸು ಸಾಧಿಸಿದೆ. ಈಗ ಸಾರ್ವಜನಿಕವಾಗಿ ಕೃಷಿಗೆ ಈ ತಳಿಯನ್ನು ಶಿಫಾರಸು ಮಾಡಿದ್ದು, ಗೇರು ಕೃಷಿಕರ ಗಮನ ಸೆಳೆಯಲು ಆರಂಭಿಸಿದೆ.ಪ್ರತಿ ವರ್ಷ ನವೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಹೂ ಬಿಡಲಿದ್ದು, 5.5 ರಿಂದ 6.0 ಗ್ರಾಂ ಬೀಜದ ತೂಕ ಇರುತ್ತದೆ. ಒಂದು ಮರದಲ್ಲಿ 1 ರಿಂದ 1.50 ಕಿಲೋ ಫಸಲು ತೆಗೆಯಲು ಸಾಧ್ಯ. ವರ್ಷದಲ್ಲಿ ಒಂದು ಮರ ಆರು ಕೊಯ್ಲಿನಲ್ಲಿ 9.1 ಕಿಲೋ ಗೇರು ಫಸಲು ಸಿಗುತ್ತದೆ. ಸದ್ಯ ಕರಾವಳಿ ಜಿಲ್ಲೆಯಲ್ಲಿ ಮಾತ್ರ ಕುಬ್ಜ ಗೇರು ತಳಿ ಬೆಳೆಸಲಾಗುತ್ತಿದೆ.
ಸಾಧಾರಣ ಹೊಳೆಯುವ ಕೆಂಪು ಬಣ್ಣ, ಗರಿಗರಿ ಮತ್ತು ಕಡಿಮೆ ನಾರಿನಂಶದಿಂದ ಕೂಡಿದ್ದು, ಕಾಂಡ ಅಲ್ಲಲ್ಲಿ ಗಂಟು ಗಂಟಾಗಿರುತ್ತದೆ.ಟೇರೇಸ್‌ಗೆ ಉಪಯುಕ್ತ:
ಕುಬ್ಜ ಗೇರು ಗಿಡಗಳು ಗಿಡ್ಡ ಇರುವುದರಿಂದ ಮನೆಯ ಕೈ ತೋಟ, ತಾರಸಿ ತೋಟ, ಕೃಷಿ ಮತ್ತು ಬೊನ್ಸಾಯಿ ಕೃಷಿಗೆ ಸೂಕ್ತ. ಆದರೆ ಈ ತಳಿಯಿಂದ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗದು. ಹವ್ಯಾಸಿಯಾಗಿಯೂ ಗೇರು ಕೃಷಿ ನಡೆಸಲು ಇದು ಉಪಯುಕ್ತ ತಳಿ.ಕುಬ್ಜ ತಳಿ ಆಗಿರುವುದರಿಂದ ಕೊಯ್ಲು ಸುಲಭ, ಖರ್ಚು ಕಡಿಮೆ. ಸಸ್ಯಸಂರಕ್ಷಣಾ ಕ್ರಮ ತೆಗೆದುಕೊಳ್ಳುವುದು ಸುಲಭ ಎನ್ನುವುದು ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಅಭಿಪ್ರಾಯ.
ಕುಬ್ಜ ಗಿಡ ಪುತ್ತೂರಲ್ಲಿ ಮಾತ್ರ ಲಭ್ಯಕುಬ್ಜ ಗೇರು ಗಿಡ ಸದ್ಯಕ್ಕೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ 08251-ದಲ್ಲಿ ಮಾತ್ರ ಲಭ್ಯವಿದೆ. ಕಸಿ ಮೂಲಕ ಈ ಕುಬ್ಜ ಗಿಡವನ್ನು ಅಭಿವೃದ್ಧಿಪಡಿಸಿದ್ದು, ಒಂದು ಗಿಡಕ್ಕೆ 50 ರು. ದರ ಇದೆ. ನಾಟಿ ಮಾಡಿದ ಎರಡನೇ ವರ್ಷದಲ್ಲಿ ಹೂ ಬಿಡಲು ಆರಂಭಿಸುತ್ತದೆ. ವಾಣಿಜ್ಯ ಉದ್ದೇಶಕ್ಕೆ ಸೂಕ್ತ ಅಲ್ಲದಿದ್ದರೂ ಹವ್ಯಾಸಿಯಾಗಿ ಅದರಲ್ಲೂ ಮುಖ್ಯವಾಗಿ ಪಟ್ಟಣ ಪ್ರದೇಶದಲ್ಲಿ ಟೆರೇಸ್‌ನಲ್ಲಿ ಬೆಳೆಸಲು ಅನುಕೂಲ.
ಈ ಕುಬ್ಜ ಗೇರು ತಳಿಯನ್ನು ವಾಣಿಜ್ಯಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಸಲು ಸಾಧ್ಯವಾಗದು. ಆದರೆ ಹವ್ಯಾಸಿಯಾಗಿ, ಆಲಂಕಾರಿಕವಾಗಿ ಟೇರೇಸ್, ಬೋನ್ಸಾಯಿಗಳಲ್ಲಿ ಬೆಳೆಸುವುದು ಹೆಚ್ಚು ಸೂಕ್ತ.-ಡಾ.ಜೆ.ದಿನಕರ ಅಡಿಗ, ನಿರ್ದೇಶಕರು, ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು
-------------