ಅಪ್ರಾಪ್ತ ಬಾಲಕಿಯರ ಅಶ್ಲೀಲ ಫೋಟೊ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು

ಬಳ್ಳಾರಿ: ಅಪ್ರಾಪ್ತ ಬಾಲಕಿಯರಿಗೆ ಹಣದ ಆಮಿಷವೊಡ್ಡಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲವೊಂದನ್ನು ಬಳ್ಳಾರಿ ಪೊಲೀಸರು ಡಿಕಾಯ್ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿದ್ದು, ಈ ಸಂಬಂಧ 11 ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ಐವರು ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ನಗರದ ಮಿಲ್ಲರ್‌ಪೇಟೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ದಂಧೆ ಬಳ್ಳಾರಿ ನಗರ ಉಪವಿಭಾಗದ ಪೊಲೀಸರು ಭೇದಿಸಿದ್ದಾರೆ. ಅಪ್ರಾಪ್ತ ಬಾಲಕಿಯರ ಅಶ್ಲೀಲ ಫೋಟೊ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಅವುಗಳನ್ನು ಬಳಸಿಕೊಂಡು ಗ್ರಾಹಕರನ್ನು ಸೆಳೆಯುವುದು ಹಾಗೂ ಬೆಂಗಳೂರು, ಅನಂತಪುರ, ವಿಜಯಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬಾಲಕಿಯರನ್ನು ಕಳುಹಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಣದ ಆಮಿಷವೊಡ್ಡಿ ದಂಧೆಗೆ ಬಳಕೆ:ಮಿಲ್ಲರ್‌ಪೇಟೆಯ ಗೋವಿಂದಮ್ಮ ಹಾಗೂ ಇತರ 15 ಮಂದಿ ಸೇರಿಕೊಂಡು ಹಣ ಸಂಪಾದಿಸುವ ಉದ್ದೇಶದಿಂದ ಅಪ್ರಾಪ್ತ ಬಾಲಕಿಯರಿಗೆ ಹಣದ ಆಮಿಷವೊಡ್ಡುತ್ತಿದ್ದರು. ಬಳಿಕ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎನ್ನಲಾಗಿದೆ. ಬಾಲಕಿಯರ ಅಶ್ಲೀಲ ಫೋಟೊ ಹಾಗೂ ವಿಡಿಯೋ ಸೆರೆಹಿಡಿದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಲಕ್ಷ್ಮೀಪೂಜೆ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ದಂಧೆಯೂ ಪತ್ತೆಯಾಗಿದೆ. ಆರೋಪಿಗಳು ದಂಧೆಯಿಂದ ಬಂದ ಹಣ ಮೂರು ಭಾಗಗಳಾಗಿ ಹಂಚಿಕೊಳ್ಳುತ್ತಿದ್ದರು. ಒಂದು ಭಾಗವನ್ನು ದಂಧೆಯ ಮುಖ್ಯಸ್ಥರಿಗೆ, ಮತ್ತೊಂದು ಭಾಗ ಸಂತ್ರಸ್ತರಿಗೆ ಹಾಗೂ ಉಳಿದ ಭಾಗ ಆರೋಪಿಗಳು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಿದ್ದರು ಎಂದು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಮಾಹಿತಿ ನೀಡಿದರು.

ಕೋಡ್‌ವರ್ಡ್ ಮೂಲಕ ವ್ಯವಹಾರ: ಆರೋಪಿಗಳು ಪೊಲೀಸರ ಕಣ್ತಪ್ಪಿಸಲು ಕೋಡ್‌ವರ್ಡ್‌ಗಳನ್ನು ಬಳಸಿಕೊಂಡು ದಂಧೆ ನಡೆಸುತ್ತಿದ್ದರು. ಸಂತ್ರಸ್ತ ಮಹಿಳೆಯರನ್ನು ಪೇಪರ್ ಎಂದು, ಗ್ರಾಹಕರನ್ನು ಡಿಆರ್‌ ಎಂದು ಸಂಕೇತ ಪದಗಳಲ್ಲಿ ಗುರುತಿಸುತ್ತಿದ್ದರು. ಸಂತ್ರಸ್ತರ ವಿವಿಧ ಭಂಗಿಗಳಲ್ಲಿನ ಫೋಟೊ ಹಾಗೂ ವಿಡಿಯೋ ತೆಗೆದು ಯಾರಿಗೆ ಕಳುಹಿಸುತ್ತಿದ್ದರು, ಅವುಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಜಾಲದ ಕಾರ್ಯವೈಖರಿ ವ್ಯವಸ್ಥಿತವಾಗಿದ್ದು, ಹಣ ಸಂಪಾದನೆ ಮುಖ್ಯ ಉದ್ದೇಶವಾಗಿಟ್ಟುಕೊಂಡು ಅಪ್ರಾಪ್ತ ಬಾಲಕಿಯರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಅಂಶಗಳು ತನಿಖೆಯಲ್ಲಿ ಬಹಿರಂಗವಾಗಿವೆ.

ಈ ಪ್ರಕರಣ ಪತ್ತೆಹಚ್ಚಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ಸುಮಾರು 45 ದಿನಗಳ ಕಾಲ ನಿರಂತರವಾಗಿ ರಹಸ್ಯ ಕಾರ್ಯಾಚರಣೆ ನಡೆಸಿದೆ. ಅಕ್ಕಪಡೆಯ ಸಿಬ್ಬಂದಿ ಲಲಿತಮ್ಮ, ಶಾಹೀದಾ, ಅನಿತಾ ಹಾಗೂ ರುಕಿಯಾ ಭಾನು ಅವರು ಖಚಿತ ಮಾಹಿತಿ ಆಧರಿಸಿ ತಮ್ಮ ಹೆಸರು ಬದಲಾಯಿಸಿಕೊಂಡು, ಆರೋಪಿಗಳಾದ ಗೋವಿಂದಮ್ಮ, ಈರಮ್ಮ ಹಾಗೂ ಎರ್ರಿಸ್ವಾಮಿ ಅವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಬಳಿಕ ಡಿಕಾಯ್ ಕಾರ್ಯಾಚರಣೆ ನಡೆಸಿ ದಂಧೆಯ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕಪಡೆಯ ಮಹಿಳಾ ಸಿಬ್ಬಂದಿಯ ಈ ಕಾರ್ಯಾಚರಣೆ ಪೊಲೀಸ್ ಇಲಾಖೆ ಶ್ಲಾಘಿಸಿದೆ.

11 ಮಂದಿ ಬಂಧನ, ಐವರಿಗಾಗಿ ಶೋಧ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 243/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂಗಳು, ಐಟಿಪಿ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಗೋವಿಂದಮ್ಮ, ನಾಗರಾಜ, ರಾಜು, ಎರ್ರಿಸ್ವಾಮಿ, ಈರಮ್ಮ, ಮಹಮ್ಮದ್, ವಿನೂತಬಾಯಿ, ರಾಬಿಯಾ, ಗೌಸಿಯಾ, ಗಂಗಾಧರ, ಅನ್ವರ್, ಉಸ್ಮಾನ್, ರಾಹುಲ್, ಅಲಿಬೈ, ಅಶ್ರಫ್ ಹಾಗೂ ಬಾಬುರಾವ್ ಸೇರಿದಂತೆ ಒಟ್ಟು 16 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಈ ಪೈಕಿ 1ರಿಂದ 9ನೇ ಆರೋಪಿಗಳು, 12ನೇ ಹಾಗೂ 16ನೇ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟು 11 ಮಂದಿ ಬಂಧನವಾಗಿದ್ದು, ಉಳಿದ ಐವರು ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿಎಸ್ಪಿ ಗೋವಿಂದ ರಾಜು, ಪಿಐ ಮಹಮ್ಮದ್ ರಫಿ, ಪಿಎಸ್‌ಐ ಸುಪ್ರೀತ್, ಪಿಎಸ್‌ಐ ವಲಿಭಾಷಾ, ಎಸ್‌ಜೆಪಿಯು ಘಟಕದ ಸಿಬ್ಬಂದಿ ಹಾಗೂ ಅಕ್ಕಪಡೆಯ ಮಹಿಳಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.