ಅಭಿಜಾತ ಕಲೆಗಳ ಉಳಿಸಿ, ಪ್ರೋತ್ಸಾಹಿಸಿ: ಶಂಕರಪ್ಪ

| Published : Mar 20 2024, 01:19 AM IST

ಸಾರಾಂಶ

ಮಲೆನಾಡು ಮತ್ತು ಅರೆಮಲೆನಾಡು ಭಾಗದಲ್ಲಿ ಯಕ್ಷಗಾನದಷ್ಟೇ ಜನಪ್ರಿಯ ಗೇಯ ಗಾಯನದಲ್ಲಿ ಬಯಲಾಟವೂ ಒಂದು. ಮೂಲದಿಂದಲೂ ಇಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕಲಾವಿದರಿದ್ದು, ತುಸು ನೇಪಥ್ಯಕ್ಕೆ ಸರಿದಿರುವ ಇಂತಹ ಅಭಿಜಾತ ಕಲೆಗಳು ಉಳಿಯಬೇಕಿದೆ ಎಂದು ಕಲಾವಿದ ಶಂಕರಪ್ಪ ಸೊರಬದಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಲೆನಾಡು ಮತ್ತು ಅರೆಮಲೆನಾಡು ಭಾಗದಲ್ಲಿ ಯಕ್ಷಗಾನದಷ್ಟೇ ಜನಪ್ರಿಯ ಗೇಯ ಗಾಯನದಲ್ಲಿ ಬಯಲಾಟವೂ ಒಂದು. ಮೂಲದಿಂದಲೂ ಇಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕಲಾವಿದರಿದ್ದು, ತುಸು ನೇಪಥ್ಯಕ್ಕೆ ಸರಿದಿರುವ ಇಂತಹ ಅಭಿಜಾತ ಕಲೆಗಳು ಉಳಿಯಬೇಕಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ದಿ. ಕುಮ್ಮೂರು ರಂಗಪ್ಪ ಅವರ ಪುತ್ರ ಕಲಾವಿದ ಶಂಕರಪ್ಪ ಹೇಳಿದರು.

ತಾಲೂಕಿನ ಕುಮ್ಮೂರು ಗ್ರಾಮದಲ್ಲಿ ಸೋಮವಾರ ಶ್ರೀ ಆಂಜನೇಯ ಮತ್ತು ಬಸವೇಶ್ವರ ದೇವರ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಮಾರುತಿ ಬಯಲಾಟ ಮಂಡಲಿ ಏರ್ಪಡಿಸಿದ್ದ ಭೀಮಾರ್ಜುನರ ಕಾಳಗ ದೊಡ್ಡಾಟದ ಭಾಗವತಿಗೆ ನಡೆಸಿ ಅವರು ಮಾತನಾಡಿದರು.

ಕಲೆ, ಕಲಾವಿದ ಉಳಿಯಬೇಕು. ಈ ನಿಟ್ಟಿನಲ್ಲಿ ಬೆಳೆಸಿ, ಪ್ರೋತ್ಸಾಹಿಸುವ ಹೃದಯ ಶ್ರೀಮಂತಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ಜನಪದೀಯ ಮೂಲಬೇರು ಗ್ರಾಮೀಣ ಭಾಗದಲ್ಲಿ ಅಡಗಿದೆ. ಅದನ್ನು ಆಹ್ವಾದಿಸುವ ಮನಸ್ಸುಗಳು ಆಧುನಿಕತೆಯ ನೆಪದಲ್ಲಿ ಕವಲು ದಾರಿಯಲ್ಲಿ ಹೊರಳಿವೆ. ಹಳೇ ತಲೆಮಾರು ಮರೆಯಾಗುವ ಮುನ್ನ ಯುವಜನತೆ ಗ್ರಾಮೀಣ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ತಂದೆ ಕುಮ್ಮೂರು ರಂಗಪ್ಪ ಅವರ ಸಮಕಾಲೀನ ಅನೇಕರು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕೆಲವರಿಗೆ ರಾಜ್ಯಮಟ್ಟದ ಪುರಸ್ಕಾರವೂ ದೊರೆತಿದೆ. ಒಂದು ಕಾಲದಲ್ಲಿ ಈ ನೆಲೆಯ ಸಂಸ್ಕೃತಿಯ ಛಾಪು ಮೂಡಿಸಿದ್ದ ಬಯಲಾಟಕ್ಕೆ ಈಗಿನ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.

ಅನಂತರ ಗ್ರಾಮಸ್ಥರು ಕಲಿತ "ಭೀಮಾರ್ಜುನರ ಕಾಳಗ " ದೊಡ್ಡಾಟ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ಚಂದ್ರಯ್ಯ, ಮುಮ್ಮೇಳದಲ್ಲಿ ಸೂತ್ರಧಾರನಾಗಿ ನಿತಿನ್, ಗಣಪತಿಯಾಗಿ ನಿರಂಜನ್, ಶಾರದೆಯಾಗಿ ಶ್ರೇಯಸ್ಸ್, ಬಾಲಗೋಪಾಲರಾಗಿ ಆದರ್ಶ, ಭರತ್, ಧರ್ಮರಾಯನಾಗಿ ಪಾಂಡುರಂಗ, ಭೀಮನಾಗಿ ಲೋಕೇಶ್, ಅರ್ಜುನನಾಗಿ ಕೆರಿಯಪ್ಪ, ಪರಮೇಶ್ವರನಾಗಿ ಚೂಡಾಮಣಿ, ಚಾರಕನಾಗಿ ಮಂಜುನಾಥ್, ಶಿವಪುತ್ರರಾಗಿ ಧ್ರುವಪತಿ, ಪ್ರಮೋದ್, ಸಖಿಯಾಗಿ ದಿಲೀಪ, ಚಂಡಿಯಾಗಿ ರವಿ ಪಾತ್ರ ನಿರ್ವಹಿಸಿದರು.

ದೊಡ್ಡಾಟದ ಮ್ಯಾನೇಜರ್ ಶಿವುಕುಮಾರ್ ಗೌಡ, ಸಂಘದ ಅಶೋಕ್, ಸಹಾಯಕ ಶಿವು ಮತ್ತು ಸೋಮು ಗೌಡ, ಗ್ರಾಮಸ್ಥರು ಹಾಜರಿದ್ದರು.

- - - -೧೯ಕೆಪಿಸೊರಬ೦೧:

ಸೊರಬ ತಾಲೂಕಿನ ಕುಮ್ಮೂರು ಗ್ರಾಮದಲ್ಲಿ ಶ್ರೀ ಆಂಜನೇಯ ಮತ್ತು ಬಸವೇಶ್ವರ ದೇವರ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಮಾರುತಿ ಬಯಲಾಟ ಮಂಡಲಿ ಏರ್ಪಡಿಸಿದ್ದ ಭೀಮಾರ್ಜುನರ ಕಾಳಗ ದೊಡ್ಡಾಟ ಪ್ರದರ್ಶನಗೊಂಡಿತು.