ನಗರಸಭೆ ಸ್ವತ್ತು ರಕ್ಷಿಸಿಕೊಳ್ಳಿ: ಅಧಿಕಾರಿಗಳಿಗೆ ಸಂಘಟನೆ ತಾಕೀತು

| Published : Jul 20 2025, 01:15 AM IST

ಸಾರಾಂಶ

ದೊಡ್ಡಬಳ್ಳಾಪುರ: ನಗರಸಭೆಗೆ ಸೇರಿರುವ ಸರ್ವೆ ನಂ.112ರ 20 ಎಕರೆ ಜಮೀನು, ಪುರಸಭೆ (ಹಾಲಿ ನಗರಸಭೆ) ಎಂದು ದಾಖಲೆಗಳಲ್ಲಿ ನಮೂದಾಗಿದ್ದು ಕೂಡಲೇ ಈ ಸ್ವತ್ತನ್ನು ನಗರಸಭೆ ರಕ್ಷಿಸಿಕೊಳ್ಳಬೇಕಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ದೊಡ್ಡಬಳ್ಳಾಪುರ: ನಗರಸಭೆಗೆ ಸೇರಿರುವ ಸರ್ವೆ ನಂ.112ರ 20 ಎಕರೆ ಜಮೀನು, ಪುರಸಭೆ (ಹಾಲಿ ನಗರಸಭೆ) ಎಂದು ದಾಖಲೆಗಳಲ್ಲಿ ನಮೂದಾಗಿದ್ದು ಕೂಡಲೇ ಈ ಸ್ವತ್ತನ್ನು ನಗರಸಭೆ ರಕ್ಷಿಸಿಕೊಳ್ಳಬೇಕಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಕುರಿತಂತೆ ನಗರಸಭೆ ಪೌರಾಯುಕ್ತ ಕಾರ್ತೀಕ್ ಈಶ್ವರ್‌ರಿಗೆ ಮನವಿ ಸಲ್ಲಿಸಿ ಮಾತನಾಡಿದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಚಂದ್ರಶೇಖ‌ರ್, ದೊಡ್ಡಬಳ್ಳಾಪುರ ನಗರಸಭೆ ಪಕ್ಕದಲ್ಲೇ ಇರುವ 20 ಎಕರೆ ಜಾಗ ಪುರಸಭೆಗೆ ಸೇರಿದ್ದು ಎಂದು ದಾಖಲಾತಿಗಳು ತಿಳಿಸುತ್ತವೆಯಾದರೂ ಮೇಲ್ನೋಟಕ್ಕೆ ಪುರಸಭೆ ಜಾಗವೆಂದು ಭಾಸವಾಗುತ್ತಿಲ್ಲ. ದೊಡ್ಡಬಳ್ಳಾಪುರ ನಗರ ವೇಗದಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ವಿಚಾರಗಳಿಗೆ ಈ ನಗರವು ಕೇಂದ್ರಬಿಂದುವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಹಾಗೆಯೇ ಇದೀಗ ನಮ್ಮ ಜಿಲ್ಲೆ ಬೆಂಗಳೂರು ಉತ್ತರ ಎಂದು ಘೋಷಣೆಯಾಗಿರುವ ಬೆನ್ನಲ್ಲೇ ನಮ್ಮ ನಗರಸಭೆ ಗ್ರೇಡ್ 1ಗೆ ಮುಂಬಡ್ತಿಯಾಗಿದೆ. ಹಾಗಾಗಿ ಹೆಚ್ಚಿನ ಕಾರ್ಯದೊತ್ತಡ ನಗರಸಭೆ ಹಾಗೂ ಪುರಸಭೆ ತೆಕ್ಕೆಗೆ ಬೀಳುವ ಕಾರಣ ಹೆಚ್ಚಿನ ಜಾಗದ ಹಾಗೂ ಕಟ್ಟಡ ಹಾಗೂ ಮೂಲಸೌಕರ್ಯಗಳ ಅವಶ್ಯಕತೆ ಹೆಚ್ಚುತ್ತದೆ.ಅದ್ದರಿಂದ ಈಗಾಗಲೇ ಪುರಸಭೆ ಹೆಸರಿನಲ್ಲಿರುವ ಹಾಗೂ ನಗರಸಭೆಗೆ ಹೊಂದಿಕೊಂಡಂತೆಯೇ ಇರುವ ಈ 20 ಎಕರೆ ಜಾಗವನ್ನು ಅಳತೆ ಮಾಡಿಸಿ ಪುರಸಭೆಯ ಸುಪರ್ದಿಗೆ ತೆಗೆದು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಅಲ್ಲದೇ, ಈ ಜಾಗದಲ್ಲಿ ಒಂದು ಫುಡ್ ಕೋರ್ಟ್ ನಿರ್ಮಿಸಿದ್ದಲ್ಲಿ ಬಹಳಷ್ಟು ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅನೂಕೂಲವಾಗುತ್ತದೆ ಎಂದು ಹೇಳಿದರು.

ಭಗತ್ ಸಿಂಗ್ ಕ್ರೀಡಾಂಗಣದ ಸಮೀಪದ ಹೊಸ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಟಿಎಪಿಎಂಸಿಎಸ್ ಕಚೇರಿ 112 ಸರ್ವೆ ನಂಬರ್‌ಗೆ ಸೇರಿದ್ದು, ಈ ವ್ಯಾಪ್ತಿಯಲ್ಲಿ 20 ಎಕರೆ ಪುರಸಭೆಗೆ ಸೇರಿದೆ. ಈ ಜಾಗವನ್ನು ಕೂಡಲೆ ಕೂಡಲೇ ರಕ್ಷಿಸಿ ನಗರಸಭೆಗೆ ಸೇರಿಸಿಕೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡಿಗರಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಾನಂದ್, ಸುರೇಶ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

18ಕೆಡಿಬಿಪಿ1- ದೊಡ್ಡಬಳ್ಳಾಪುರ ನಗರಸಭೆಗೆ ಸೇರಿರುವ ಸರ್ವೆ ನಂ.112ರ 20 ಎಕರೆ ಜಮೀನಿನ ಸ್ವತ್ತನ್ನು ನಗರಸಭೆ ರಕ್ಷಿಸಿಕೊಳ್ಳಬೇಕಿದೆ ಎಂದು ಕನ್ನಡಿಗರ ಕರವೇ ಕಾರ್ಯಕರ್ತರು ಪೌರಾಯುಕ್ತ ಕಾರ್ತೀಕ್ ಈಶ್ವರ್‌ರಿಗೆ ಮನವಿ ಸಲ್ಲಿಸಿದರು.