ಪ್ರಾಚೀನ ಭಾರತದಲ್ಲಿರುವ ಎಲ್ಲಾ ಸ್ಮಾರಕಗಳು ನಮ್ಮ ಹೆಮ್ಮೆಯ ಇತಿಹಾಸವನ್ನು ಸಾರುತ್ತವೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಇದರ ರಕ್ಷಣೆಯತ್ತ ಯುವ ಪೀಳಿಗೆ ತಮ್ಮ ಗಮನವನ್ನು ನೀಡಬೇಕು ಎಂದು ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ದೀಪಕ್ ವಿಲ್ಸನ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ಪ್ರಾಚೀನ ಭಾರತದಲ್ಲಿರುವ ಎಲ್ಲಾ ಸ್ಮಾರಕಗಳು ನಮ್ಮ ಹೆಮ್ಮೆಯ ಇತಿಹಾಸವನ್ನು ಸಾರುತ್ತವೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಇದರ ರಕ್ಷಣೆಯತ್ತ ಯುವ ಪೀಳಿಗೆ ತಮ್ಮ ಗಮನವನ್ನು ನೀಡಬೇಕು ಎಂದು ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ದೀಪಕ್ ವಿಲ್ಸನ್ ಕರೆ ನೀಡಿದರು.ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ದಿವಾನ್ ಪೂರ್ಣಯ್ಯ ಸರ್ಕಾರಿ ವಸ್ತುಸಂಗ್ರಹಾಲಯ, ಪುರಾತತ್ವ ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ವಿಶ್ವ ಪರಂಪರೆ ಸಪ್ತಾಹ-2026 ರ ಅಂಗವಾಗಿ ನಡೆದ ಐತಿಹಾಸಕ ಸ್ಮಾರಕಗಳ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಡೀ ದೇಶದಲ್ಲೇ ನಮ್ಮ ರಾಜ್ಯ ವಾಸ್ತುಶಿಲ್ಪಗಳ ಪ್ರಯೋಗಗಳ ತೊಟ್ಟಿಲು ಎಂದು ಕರೆಯಲ್ಪಡುತ್ತದೆ. ಕ್ರಿ.ಪೂ. ದಿಂದ ಬ್ರಿಟಿಷ್ ಆಡಳಿತದ ವರೆಗೂ ನಮ್ಮ ದೇಶದಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಧರ್ಮದವರೂ ಕೂಡ ವಾಸ್ತುಶಿಲ್ಪಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ವಿಜಯನಗರ ಅರಸರ ಕಾಲದಲ್ಲಿ ದೇಗುಲಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿತ್ತು. 600 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ನಮ್ಮ ಇತಿಹಾಸ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿತ್ತು ಎಂದು ಹೇಳಿದರು.ಚಾಮರಾಜನಗರ ಜಿಲ್ಲೆಯೂ ಕೂಡ ವಾಸ್ತುಶಿಲ್ಪಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಯಳಂದೂರಿನ ಗೌರೇಶ್ವರ ದೇಗುಲ, ಬಳೇಮಂಟಪ, ತೆರಕಣಾಂಬಿ ದೇಗುಲಗಳು, ಮಧ್ಯರಂಗ, ಸೋಮೇಶ್ವರ ದೇಗುಲ, ನರಸಮಂಗಲ, ಬಿಳಿರಿಗಿರಂಗನಬೆಟ್ಟ, ಗೋಪಾಲಸ್ವಾಮಿ, ಮಲೆಮಹದೇಶ್ವರ ಬೆಟ್ಟಗಳು, ಕನಕಗಿರಿಯ ಜಿನ ದೇಗುಲಗಳು ಸೇರಿ ಅನೇಕ ಉದಾಹರಣೆಗಳು ಇಲ್ಲಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ನಾವು ಮೌಢ್ಯತೆಯಿಂದ ಹೊರಬರಬೇಕು. ಹೊಸ ದೇಗುಲಗಳನ್ನು ಕಟ್ಟಿಸುವ ಬದಲು ಐತಿಹಾಸಿಕ ಮಹತ್ವವುಳ್ಳ ಹಳೇ ದೇಗುಲಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು. ಇದನ್ನು ಹಾಳು ಮಾಡಲು ಬಿಡಬಾರದು, ಶಾಸನಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಒಂದೇ ಕೋಣೆಗೆ ಸೀಮಿತವಾದ ಕಾರ್ಯಕ್ರಮ:
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಈ ಕಾರ್ಯಕ್ರಮ ಕೇವಲ ಕಾಲೇಜಿನ ಒಂದು ಕೋಣೆಗೆ ಸೀಮಿತವಾಗಿತ್ತು. ದಿವಾನ್ ಪೂರ್ಣಯ್ಯ ವಸ್ತುಸಂಗ್ರಹಾಲಯವನ್ನು ನಿರ್ವಹಿಸುವ ಈ ಇಲಾಖೆ ಇದುವರೆವಿಗೂ ಒಂದು ಪಟ್ಟಣದಲ್ಲಿ ಒಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿಲ್ಲ. ಸಾರ್ವಜನಿಕವಾಗಿ ಈ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡಲು ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸುನೀಲ್ಕುಮಾರ್ ಮಾತನಾಡಿದರು. ಇಲಾಖೆಯ ಜೆಇ ಗುರುಮಲ್ಲಪ್ಪ, ಹಿರಿಯ ಗ್ರಂಥಪಾಲಕ ಎಚ್.ಎ.ಅರುಣ, ಇತಿಹಾಸ ವಿಭಾಗದ ಡಾ.ಬಿ.ಆರ್.ಜಯಣ್ಣ, ಸಿದ್ದರಾಜೇಗೌಡ ಇತರರು ಇದ್ದರು.