ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಪೆನ್ಡ್ರೈವ್ ಹಂಚಿದವರನ್ನು ಕೂಡಲೇ ಬಂಧಿಸಿ ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡಬೇಕು, ಸರಕಾರವು ಎಸ್ಪಿ ಮತ್ತು ಎಎಸ್ಪಿ ಯವರನ್ನು ಅಧಿಕಾರದಿಂದ ಸಸ್ಪೆಂಡ್ ಮಾಡಬೇಕೆಂದು ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ಹಾಗೂ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಮಹಿಳೆಯನ್ನು ಅಪಹರಿಸಿರುವ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸದೆ ಅವರಿಗೆ ಕಾಲಾವಕಾಶ ನೀಡಿರುವುದು ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್.ಡಿ. ರೇವಣ್ಣ ಪರ ಮೃಧು ಧೋರಣೆ ಹೊಂದಿದ್ದಾರೆ ಎಂಬ ಚರ್ಚೆಗೆ ಪುಷ್ಟಿ ನೀಡುವಂತಿದೆ, ರಾಜ್ಯ ಸರ್ಕಾರದ ಈ ನಡೆ ಖಂಡನೀಯ. ಸಂತ್ರಸ್ತೆಯರ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸರ್ಕಾರ ಮತ್ತು ಎಸ್ಐಟಿ ತೀವ್ರ ನಿಗಾವಹಿಸಬೇಕು. ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಬದಲು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತ ಮಹಿಳೆಯರ ಪರ ನಿಲ್ಲಬೇಕೆಂಬುದು ಒತ್ತಾಯವಾಗಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ ಎಸ್ಐಟಿಯನ್ನು ನೇಮಕ ಮಾಡಿದೆ. ಆದರೂ ಮತ್ತೆ ಮತ್ತೆ ಹೆಣ್ಣು ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಹೊರಬರುತ್ತಿರುವುದು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ಪೆನ್ಡ್ರೈವ್ ನ ಮೂಲಗಳು ಜಗಜ್ಜಾಹೀರಾಗಿದ್ದರೂ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದಿರುವುದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತನವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ. ಎಸ್ಐಟಿ ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕಿದೆ. ಇಲ್ಲವಾದಲ್ಲಿ ಸಂತ್ರಸ್ತ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭಗಳೂ ಎದುರಾಗಬಹುದು, ಅದಕ್ಕೆ ನೇರವಾಗಿ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿದರು, ಕಾರ್ತಿಕ್ ಹಗರಣವನ್ನು ಮೊದಲೇ ಸರಿಯಾಗಿ ನಿರ್ವಹಿಸಿದ್ದರೆ ಅವರ ಬಳಿ ಇದ್ದ ಎಲ್ಲಾ ವಿಡಿಯೋಗಳೂ ಸಿಗುತ್ತಿದ್ದವು. ಜಿಲ್ಲಾ ಪೊಲೀಸ್ ಇಲಾಖೆ ಅದನ್ನು ಸರಿಯಾಗಿ ನಿರ್ವಹಿಸಲಿಲ್ಲ. ಒಬ್ಬ ವಕೀಲರಾಗಿ ದೇವರಾಜೇಗೌಡರು ಏನೇನೋ ಮಾತನಾಡಿದ್ದು, ಅವತ್ತೇ ಈ ವಿಡಿಯೋಗಳನ್ನು ಪೊಲೀಸರಿಗೆ ನೀಡಿದ್ದರೆ ಈ ಪ್ರಕರಣ ಇಲ್ಲಿವರೆಗೂ ಬರುತ್ತಿರಲಿಲ್ಲ.ಇದರಲ್ಲಿ ಸಂಪೂರ್ಣ ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್, ಎದ್ದೇಳು ಕರ್ನಾಟಕದ ಸಮಿತಿಯ ಇರ್ಷಾದ್ ಅಹಮದ್ ದೇಸಾಯಿ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಇತರರು ಉಪಸ್ಥಿತರಿದ್ದರು.