ಶಿಗ್ಗಾಂವಿ ತಾಲೂಕಿನ ಹೊಸೂರು ಯತ್ತಿನಹಳ್ಳಿ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ೩೫ ಎಕರೆಯ ಬೆಳ್ಳಿಗಟ್ಟಿ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಹಾವೇರಿ ಹುಕ್ಕೇರಿಮಠದ ಡಾ. ಸದಾಶಿವ ಮಹಾಸ್ವಾಮೀಜಿ ಚಾಲನೆ ನೀಡಿದರು.

ಶಿಗ್ಗಾಂವಿ: ಜಲಮೂಲ ರಕ್ಷಣೆ ಮಾಡಬೇಕು, ಜನಪರ ಯೋಜನೆಗಳನ್ನು ಮಾಡಬೇಕು ಎಂದು ಹಾವೇರಿ ಹುಕ್ಕೇರಿಮಠದ ಡಾ. ಸದಾಶಿವ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹೊಸೂರು ಯತ್ತಿನಹಳ್ಳಿ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆ ಬನ್ನೂರ ಇವರ ಸಹಯೋಗದಲ್ಲಿ ಇತ್ತೀಚೆಗೆ ೩೫ ಎಕರೆಯ ಬೆಳ್ಳಿಗಟ್ಟಿ ಕೆರೆಯ ಹೂಳೆತ್ತುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಕೊಟ್ಟಿಗೆ ಗೊಬ್ಬರ ಸಿಗುವುದು ಅಪರೂಪವಾಗಿದ್ದು, ಕೆರೆಯಲ್ಲಿ ಸಂಗ್ರಹವಾಗಿರುವ ಫಲವತ್ತಾದ ಮಣ್ಣನ್ನು ತಮ್ಮ ಹೊಲ-ಗದ್ದೆಗಳಿಗೆ ಹಾಕಿ, ಕೆರೆಯ ನೀರು ಹೆಚ್ಚಿಸುವ ಜತೆಗೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಂತರ ಮಾತನಾಡಿದ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ನೀರಿನ ಮೂಲಗಳಿಗೆ ದೇವರ ನಾಮಗಳಿವೆ. ಎಲ್ಲ ಜೀವರಾಶಿಗಳಿಗೆ ನೀರು ಮೂಲ, ನೀರನ್ನು ಸಂರಕ್ಷಣೆ ಮಾಡಿಕೊಳ್ಳಬೇಕು. ಏಳು ಜಿಪಂ ಕ್ಷೇತ್ರ ವ್ಯಾಪ್ತಿಯ ಆರು ಕೆರೆ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದರು.

ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ರವೀಂದ್ರ ಕೂಡವಕ್ಕಲಿಗರ ಮಾತನಾಡಿ, ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿ, ಹಲವು ರೈತರ ಗದ್ದೆಗಳಿಗೆ ನೀರು ನೀಡುವ ಕಾರ್ಯವನ್ನು ಭಾರತ ಸೇವಾ ಸಂಸ್ಥೆ ಮಾಡುತ್ತಿದ್ದು, ರೈತರಿಗೆ ಅತ್ಯಂತ ಮುಖ್ಯವಾದ ಸಂಪತ್ತು ನೀಡುತ್ತಿದೆ ಎಂದರು.

ಕೆಎಂಎಫ್‌ ನಿರ್ದೇಶಕ ಶಶಿಧರ ಯಲಿಗಾರ ಮಾತನಾಡಿ, ಗುಡಿ-ಗುಂಡಾರಗಳನ್ನು ಸ್ವಚ್ಛಗೊಳಿಸಿ, ಸುಣ್ಣ-ಬಣ್ಣಗಳಿಂದ ಶೃಗರಿಸುವ ಬದಲು ರೈತರ ಅನುಕೂಲ ಆಗುವ ಕೆರೆಯ ಹೂಳೆತ್ತುವ ಕಾರ್ಯ ಹಾಗೂ ಮಕ್ಕಳಿಗೆ ಶಿಕ್ಷಣ ಸಾಮಾಜಿಕ ಸೇವೆಯನ್ನು ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತಿಪ್ಪಣ್ಣ ಸಾತಣ್ಣವರ, ಹರ್ಜಪ್ಪ ಲಮಾಣಿ, ದೇವಣ್ಣ ಚಾಕಲಬ್ಬಿ, ಶಶಿಧರ ಹೊಣ್ಣನವರ, ಡಾ. ಫಕೀರಗೌಡ ಪಾಟೀಲ್, ಉದ್ಯಮಿ ನಾಗೇಂದ್ರ ಮರಳಿ, ಶಿವಾನಂದ ರಾಮಗೇರಿ, ಧರ್ಮಣ್ಣ ಡವಗಿ ಮಾತನಾಡಿದರು. ಶಿವನಗೌಡ ಪಾಟೀಲ, ನಾಗರಾಜ ಸೂರಗೊಂಡ, ರಾಜಣ್ಣ ಗಂಜೀಗಟ್ಟಿ, ಬಾಬಣ್ಣಾ ಅಗಡಿ, ಸಂತೋಷ ಹುಣಶ್ಯಾಳ, ರಾಜಣ್ಣಾ ಗಂಜಿಗಟ್ಟಿ, ವೀರಣ್ಣಾ ಡವಗಿ, ಕಾಳಪ್ಪ ಬಡಿಗೇರ, ಮಲ್ಲಯ್ಯ ನಾಗನೂರು, ಧರಣೇಂದ್ರ ಪುಟ್ಟಣ್ಣವರ, ಈರಣ್ಣ ಸಮಾಗೊಂಡ ಇದ್ದರು.

ನವೀನ ಸಾಸನೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.