ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಪಾಟೀಲ

| Published : Nov 21 2024, 01:04 AM IST

ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನ ಹಿರಿಮೆ ಗರಿಮೆಗಳ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಲ್ಲೂ ಅಭಿಮಾನವಿರಬೇಕು. ಕನ್ನಡಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಪುರಾತನ ಐತಿಹ್ಯ ಹೊಂದಿದ ವೈಶಿಷ್ಟ್ಯವಾದ ಭಾಷೆ ಕನ್ನಡ

ರೋಣ: ಕನ್ನಡ ನಾಡು,ನುಡಿ,ನೆಲ,ಜಲ ರಕ್ಷಣೆ ಯುವಕರ ಗುರುತರವಾದ ಕರ್ತವ್ಯವಾಗಿದೆ ಎಂದು ಹಿರಿಯ ಸಾಹಿತಿ ವಿ.ಕೆ. ಪಾಟೀಲ ಹೇಳಿದರು.

ಅವರು ಪಟ್ಟಣದ ಶ್ರೀ ಗುರುಪಾದೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀ ಗುರುಪಾದೇಶ್ವರ ಕೈಗಾರಿಕಾ ತರಬೇತಿ ಕಾಲೇಜು ಆಶ್ರಯದಲ್ಲಿ ಜರುಗಿದ ಕನ್ನಡ ರಾಜೋತ್ಸವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಿನ ಹಿರಿಮೆ ಗರಿಮೆಗಳ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಲ್ಲೂ ಅಭಿಮಾನವಿರಬೇಕು. ಕನ್ನಡಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಪುರಾತನ ಐತಿಹ್ಯ ಹೊಂದಿದ ವೈಶಿಷ್ಟ್ಯವಾದ ಭಾಷೆ ಕನ್ನಡವಾಗಿದ್ದು, ಕನ್ನಡ ಮಾತನಾಡುವವರು ಹೆಮ್ಮೆಯಿಂದರಬೇಕು, ಭಾಷೆಯಲ್ಲಿ ಆಕರ್ಷಣೆ ಸೊಗಡು ಅತ್ಯಂತ ಸುಂದರವಾಗಿದೆ‌.ಪ್ರತಿಯೊಬ್ಬ ಕನ್ನಡಿಗರು ಬದುಕಿನಲ್ಲಿ ಕನ್ನಡತನ ಅಳವಡಿಸಿಕೊಂಡು ಇತರ ಭಾಷೆ ಮತ್ತು ಸಂಸ್ಕೃತಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ದೇಶದಲ್ಲಿನ ಬಹುತೇಕ ಎಲ್ಲ ರಾಜ್ಯಕ್ಕೆ ವಲಸೆ ಬಂದು ಇಲ್ಲಿಯೇ ಉದ್ಯೋಗದಲ್ಲಿ ತೊಡಗಿ ಜೀವನ ಸಾಗಿಸುತ್ತಾರೆ. ಆದರೆ ಅವರು ತಮ್ಮ ತಾಯಿ ಭಾಷೆಯಲ್ಲಿಯೇ ಮಾತಾಡುತ್ತಾರೆ.ಅಂತವರಿಗೆ ಕನ್ನಡ ಕಲಿಸಿರಿ, ಬ್ಯಾಂಕ ಇತರೆ ಕಚೇರಿಗಳಲ್ಲಿ ಕನ್ನಡಕ್ಕೆ ಮಹತ್ವ ನೀಡಿ ಎಂದರು.

ಅಧ್ಯಕ್ಷತೆಯನ್ನು ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಸುಧಾ ದಾನಪ್ಪಗೌಡರ ವಹಿಸಿದ್ದರು.

ಜನಪದ ಅಕಾಡಮಿ ಸದಸ್ಯ, ಅರುಣೋದಯ ಕಲಾ ತಂಡದ ಶಂಕ್ರಣ್ಣ ಸಂಕಣ್ಣವರ ಹಾಗೂ ತಂಡದಿಂದ ನಾಡು ನುಡಿ ಕುರಿತು ಜನಪದ ಹಾಡು, ನಾಡಭಕ್ತಿಗೀತೆಗಳು ಕುರಿತು ಜಾಗೃತ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ರಮಾಕಾಂತ ಕಮತಗಿ, ಉಪನ್ಯಾಸಕ ಬಿ.ಎಸ್. ಬಲಕುಂದಿ, ವಿ.ಆರ್.ರಜಪೂತ, ವಿ.ಬಿ.ಶಿರಗುಂಪಿ, ಐ.ಎ.ಇಟಗಿ ಉಪಸ್ಥಿತರಿದ್ದರು.ಸುರೇಖಾ ಉಳ್ಳಾಗಡ್ಡಿ ನಿರೂಪಿಸಿದರು. ಪರಜಾನ ಚಿನ್ನೂರ ಸ್ವಾಗತಿಸಿದರು.