ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಪ್ರಕೃತಿ ಮತ್ತು ಭೂಮಿಯ ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿಯು ಭೂಮಿಯ ಮೇಲಿರುವ ಸರ್ವರ ಮೇಲಿದೆ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನ್ಯಾ. ಎಸ್. ನಟರಾಜ ಅಭಿಪ್ರಾಯಪಟ್ಟರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಅರಣ್ಯ ಇಲಾಖೆ, ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೂ ದಿನವನ್ನು ಆಚರಿಸಲಾಯಿತು.

ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಭೂ ದಿನಾಚರಣೆ ಹಿನ್ನೆಲೆಯಲ್ಲಿ ಗಿಡ ನೆಡುವ ಮೂಲಕ ಕಾರ್‍ಯಕ್ರಮ ಆಚರಿಸುವುದು ಕೇವಲ ಒಂದು ದಿನಕ್ಕೆ ಸೀಮಿತ ವಾಗಬಾರದು. ಭೂಮಿಯ ಮೇಲಿರುವಂತಹ ಪರಿಸರ, ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ಇನ್ನಿತರ ಜೀವ ಸಂಕುಲಗಳನ್ನು ತಾಯಿಯಂತೆ ಪೋಷಿಸುತ್ತಿರುವವಳು ಭೂಮಿ. ಆದ್ದರಿಂದ ಭೂಮಿಯ ರಕ್ಷಣೆ ಮಾಡುವುದು ಅತಿ ಮುಖ್ಯವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ, ನದಿ ಮಾಲಿನ್ಯ, ಪ್ಲಾಸ್ಟಿಕ್ ನ ಅತಿಯಾದ ಬಳಕೆ, ರಾಸಾಯನಿಕಗಳ ಬಳಕೆಯಿಂದ ಮಣ್ಣನ್ನು ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಮುಂದಿನ ಪೀಳಿಗೆಗೆ ಸಂಪೂರ್ಣವಾಗಿ ಅಳಿವಿನಂಚಿನ ಪ್ರಕೃತಿ, ಭೂಮಿಯನ್ನು ನೀಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರಕ್ಕೆ ಅನುಕೂಲವಾಗುವಂತಹ ಕಾರ್‍ಯದಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ನೀಡುವುದರೊಂದಿಗೆ ಅರಣ್ಯವನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಚ್. ಜಗನ್ನಾಥ್ ಮಾತನಾಡಿ, ಭೂಮಿಯಲ್ಲಿ ಸಮತೋಲನ ಕಾಪಾಡಲು ಪ್ರತಿಯೊಂದು ಜೀವಿಯು ಅವಶ್ಯಕ. ಆದ್ದರಿಂದ ಪರಿಸರದ ಬಗ್ಗೆ ಎಲ್ಲರಲ್ಲೂ ಗೌರವವಿರಲಿ. ಪರಿಸರವನ್ನು ನಾಶ ಮಾಡುವ ಕೆಲಸ ನಡೆದಂತಹ ಸಂದರ್ಭ ಅದನ್ನು ವಿರೋಧಿಸುವ ಕಾರ್‍ಯ, ಗಿಡ, ಮರ, ಜೀವಿಗಳು, ಪರಿಸರ ಮಣ್ಣನ್ನು ಉಳಿಸುವ ಪರವಾಗಿ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವ ವೈವಿಧ್ಯ ಇದ್ದರೆ ಮಾತ್ರ ವಿಕಸನ ಸಾಧ್ಯ. ಭೂಮಿಯ ಮೇಲೆ ಸಣ್ಣ ಬೀಜ, ಎರೆ ಹುಳು, ಪಕ್ಷಿ, ಪ್ರಾಣಿ , ಸಸ್ಯ ಪ್ರತಿಯೊಂದು ಕೂಡ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಭೂಮಿಗೆ, ಪ್ರಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಆದ್ದರಿಂದ ಮನುಷ್ಯನು ಕೂಡ ಈ ಭೂಮಿಯಲ್ಲಿ ಹುಟ್ಟಿದ ತನ್ನ ಋಣವನ್ನು ತೀರಿಸುವ ಉದ್ದೇಶದಿಂದಾದರೂ ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.ಕಾರ್‍ಯಕ್ರಮವನ್ನುದ್ದೇಶಿಸಿ ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಸಿನಾ ಬಾನು ಮಾತನಾಡಿದರು. ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಮುಖ್ಯಸ್ಥ ಜಿ.ಎಸ್. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು.


ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾ. ಪ್ರದೀಪ್ ಪೋತೆದಾರ್, ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಪ್ರಾಂಶುಪಾಲರಾದ ಟಿ.ಕೆ. ವಿನಿತ ಉಪಸ್ಥಿತರಿದ್ದರು.

ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಉಪನ್ಯಾಸಕ ವರ್ಗ, ವಿದ್ಯಾರ್ಥಿ ವರ್ಗ, ಕಾವೇರಿ ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.