ದೇಶದ ಆಸ್ತಿಯಾದ ಮಕ್ಕಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ: ಕೆ.ನಾಗಣ್ಣಗೌಡ

| Published : May 22 2025, 11:59 PM IST

ದೇಶದ ಆಸ್ತಿಯಾದ ಮಕ್ಕಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ: ಕೆ.ನಾಗಣ್ಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಕ್ಕಳು ಈ ದೇಶದ ನಿಜವಾದ ಆಸ್ತಿ, ಅವರನ್ನು ಸಂರಕ್ಷಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ. ಮಕ್ಕಳ ರಕ್ಷಣೆಗಾಗಿ ಇರುವ ಯೋಜನೆಗಳು ಹಾಗೂ ಕಾಯ್ದೆಗಳನ್ನು ಅರಿತು ಎಲ್ಲಾ ಇಲಾಖೆಗಳ ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.

ಚಿಕ್ಕಮಗಳೂರಿನ ಜಿಪಂನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳು ಈ ದೇಶದ ನಿಜವಾದ ಆಸ್ತಿ, ಅವರನ್ನು ಸಂರಕ್ಷಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ. ಮಕ್ಕಳ ರಕ್ಷಣೆಗಾಗಿ ಇರುವ ಯೋಜನೆಗಳು ಹಾಗೂ ಕಾಯ್ದೆಗಳನ್ನು ಅರಿತು ಎಲ್ಲಾ ಇಲಾಖೆಗಳ ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಂದಾಯ, ಕಾರ್ಮಿಕ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಇಲಾಖೆಗಳು ಒಂದು ತಂಡದ ರೀತಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಫೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಭ್ರೂಣ ಹತ್ಯೆ ನಿಷೇಧ, ಮಕ್ಕಳ ಮಾರಾಟ ನಿಷೇಧ ಕಾಯ್ದೆ ಗಳನ್ನು ಮಕ್ಕಳ ಸಂರಕ್ಷಣೆಗಾಗಿ ಜಾರಿಗೆ ತರಲಾಗಿದೆ. ಅಭಿವೃದ್ಧಿ ಆಯೋಗದ ನೇತೃತ್ವದಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆ ರಾಜ್ಯ ಮಟ್ಟದಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಸಮಿತಿಗಳು ಆಸ್ತಿತ್ವದಲ್ಲಿವೆ. ತಾಲೂಕು ಮಟ್ಟದ ಸಮಿತಿ ಸಭೆಗಳು 3 ತಿಂಗಳಿಗೊಮ್ಮೆ ತಹಸೀಲ್ದಾರ್ ನೇತೃತ್ವದಲ್ಲಿ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೇಳಿದರು.ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಸೇರಿ ಸಭೆ ನಡೆಸಿ, ತಮ್ಮ ಕಾರ್ಯ ವ್ಯಾಪ್ತಿಯ ಸ್ಥಿತಿಗತಿಗಳನ್ನು ಅರಿತು ಬಾಲ್ಯ ವಿವಾಹ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ತಡೆಯಬೇಕು. ಒಂದು ವೇಳೆ ಬಾಲ್ಯ ವಿವಾಹ ನಡೆದಿದ್ದರೆ ಅದಕ್ಕೆ ಪ್ರೋತ್ಸಾಹಿಸಿದ ಪೋಷಕರು, ಸಂಬಂಧಿಕರು, ಕಲ್ಯಾಣ ಮಂಟಪದ ಮಾಲೀಕರು, ಪುರೋಹಿತ ರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಅಂತಹ ಮಕ್ಕಳ ಪುನರ್ ವಸತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಮಾತನಾಡಿ, ಮೆಸ್ಕಾಂ ಅಧಿಕಾರಿಗಳಿಗೆ ಇತ್ತೀಚಿಗೆ ದಿನದಿಂದ ದಿನಕ್ಕೆ ಶಾಲೆ, ಅಂಗನವಾಡಿ, ವಸತಿ ನಿಲಯಗಳ ಮೇಲಿನ ವಿದ್ಯುತ್ ತಂತಿಗಳಿಂದಾಗುವ ಅಪಾಯ ತಪ್ಪಿಸುವಂತೆ ಸೂಚಿಸಿದರು.ಕೃಷಿ ಹೊಂಡ, ಕೆರೆ, ಕಟ್ಟೆ, ಬಾವಿಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಘಟನೆ ಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆಯೋಗದ ಇನ್ನೋರ್ವ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಶಿಶು ಆರೈಕೆ ಗೃಹ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಅವಲಂಬಿಸದೆ ಸರ್ಕಾರಿ ಆಸ್ಪತ್ರೆಯಲ್ಲಿರುವ ವ್ಯವಸ್ಥೆ ಬಳಸಿಕೊಳ್ಳವಂತೆ ಸೂಚಿಸಿದರು.ಮಹಿಳಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ಬಯೋಮೆಟ್ರಿಕ್‌ಗಳನ್ನು ಕಡ್ಡಾಯವಾಗಿ ಆಳವಡಿಸುವಂತೆ ಹಾಗೂ ಪೌಷ್ಟಿಕಾಂಶ, ಶುಚಿ-ರುಚಿ ಆಹಾರವನ್ನು ನೀಡುವ ಜೊತೆಗೆ ಸ್ನಾನಗೃಹಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿ ಚರ್ಮ ರೋಗ ಬಾರದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಮಂಜು, ವೆಂಕಟೇಶ್, ಅಪರ್ಣಾ ಎಮ್.ಕೊಳ್ಳಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. 22 ಕೆಸಿಕೆಎಂ 3ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.