ರಾಜ್ಯದಲ್ಲಿ ೩.೫ ಕೋಟಿ ಕಾರ್ಮಿಕರಿದ್ದಾರೆ. ಅವರಿಗೆ ತಿಂಗಳಿಗೆ ಕನಿಷ್ಠ ₹ ೧೮ ಸಾವಿರ ನೀಡಬೇಕಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸದ್ಯಕ್ಕೆ ತಡೆಯಾಗಿದೆ.
ಹಾನಗಲ್ಲ: ರಾಜ್ಯದ ಜನಸಂಖ್ಯೆಯ ಅರ್ಧದಷ್ಟಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಲ್ಲದೆ, ಕಾಲ-ಕಾಲಕ್ಕೆ ಅವರ ಆರೋಗ್ಯ ಪರೀಕ್ಷೆ, ದೌರ್ಜನ್ಯಕ್ಕೆ ಅವಕಾಶವಿಲ್ಲದಂತೆ ನಿಗಾವಹಿಸಬೇಕು ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟ.ಎಂ. ಶಾಹಿದ್ ತೆಕ್ಕಿಲ್ ತಿಳಿಸಿದರು.
ಬುಧವಾರ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ವಿವಿಧ ಕಾರ್ಮಿಕ ಸಂಘಟನೆಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೩.೫ ಕೋಟಿ ಕಾರ್ಮಿಕರಿದ್ದಾರೆ. ಅವರಿಗೆ ತಿಂಗಳಿಗೆ ಕನಿಷ್ಠ ₹ ೧೮ ಸಾವಿರ ನೀಡಬೇಕಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸದ್ಯಕ್ಕೆ ತಡೆಯಾಗಿದೆ. ಆದರೆ, ಗ್ಯಾಸ್-ಪೆಟ್ರೋಲ್, ಆಹಾರ ಧಾನ್ಯಗಳ ಬೆಲೆ ಏರುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಕಡಿಮೆ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.ಕಳೆದ ೯ ವರ್ಷದಿಂದ ಕಾರ್ಮಿಕರ ವೇತನ ಪರಿಷ್ಕರಣೆ ಆಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವಾಗ ಪರಿಷ್ಕರಣೆಗೆ ಮುಂದಾದರು. ಇದಕ್ಕೆ ಸಚಿವ ಸಂತೋಷ ಲಾಡ್ ಹೆಚ್ಚು ಶ್ರಮವಹಿಸಿದರು. ಕಾರ್ಮಿಕರ ಬೆವರಿಗೆ ಸರಿಯಾದ ಬೆಲೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಕೃಷಿ ಕೈಗಾರಿಕೆ ಹೋಟೆಲ್, ಕಾರ್ಖಾನೆಗಳು ಮಾತ್ರವಲ್ಲ, ಮಸೀದಿ-ದೇವಸ್ಥಾನದಗಳಲ್ಲಿ ಸೇವೆ ಸಲ್ಲಿಸುವವರೂ ಕೂಡ ಕಾರ್ಮಿಕರೇ ಆಗಿದ್ದಾರೆ. ಮನೆಗೆಲಸ , ಹಾವು ಹಿಡಿಯುವವರನ್ನೂ ಈ ನಿಯಮದಡಿ ತರಲಾಗಿದೆ ಎಂದು ಹೇಳಿದರು.
ಕಾರ್ಮಿಕರನ್ನು ೮ ಗಂಟೆಗೂ ಹೆಚ್ಚು ಕಾಲ ದುಡಿಸಿಕೊಂಡರೆ ದಿನದ ಎರಡರಷ್ಟು ವೇತನ ನೀಡಬೇಕು. ಮೋಟಾರು ವಾಹನ ಗ್ಯಾರೇಜಿನಲ್ಲಿ ಬಹಳಷ್ಟು ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ಜರುಗಿಸಬೇಕು. ಬಾಲ ಕಾರ್ಮಿಕ ಚಟುವಟಿಕೆ ನಡೆಯದಂತೆ ಜಾಗೃತಿ ಮೂಡಿಸಬೇಕು. ಕಾರ್ಮಿಕರ ಮೇಲೆ ದೌರ್ಜನ ಘಟನೆಗಳು ನಡೆಯದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ರಾಜ್ಯದಲ್ಲಿ ೯ ಪ್ರಮುಖ ಕಾರ್ಮಿಕ ಸಂಘಟನೆಗಳಿವೆ. ಅರ್ಹರಲ್ಲದವರನ್ನು ಕಾರ್ಮಿಕರು ಎಂದು ಕಾರ್ಡ್ ನೀಡಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ. ವರ್ಷಕ್ಕೆ ೯೦ ದಿನ ಕೆಲಸ ಮಾಡಿದವರು ಮಾತ್ರ ಕಾರ್ಮಿಕರು ಎಂದು ಪರಿಗಣಿಸಬೇಕು. ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮಕೈಗೊಳ್ಳಿ. ಕಾರ್ಮಿಕ ಇಲಾಖೆಯಲ್ಲಿಯೇ ಹೊರ-ಒಳ ಗುತ್ತಿಗೆಯಿಂದ ಕೆಲಸ ಮಾಡುವವರಿದ್ದಾರೆ. ಹಲವೆಡೆ ಸರ್ಕಾರಿ ಇಲಾಖೆಯ ಅಧಿಕಾರಿಗಳು ಇಲ್ಲದ್ದು ಇದೆ. ಬ್ಯಾಡಗಿಯಲ್ಲಿ ಹಲವು ದಿನಗಳಿಂದ ಕಾರ್ಮಿಕ ಇಲಾಖೆಯ ಬಾಗಿಲು ತರೆದಿಲ್ಲ ಎಂಬ ದೂರುಗಳಿವೆ. ಇವನ್ನು ಕೂಡಲೇ ಕ್ರಮ ಜರುಗಿಸಿ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದರು.ಕಳಪೆ ಕಿಟ್: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾರ್ಮಿಕರಿಗೆ ಕಳಪೆ ಕಿಟ್ ವಿತರಿಸಿದ ದೂರುಗಳಿರುವುದು ಸತ್ಯ. ಇದರಲ್ಲಿ ಸರ್ಕಾರದ ವೈಫಲ್ಯವಿಲ್ಲ. ಆದರೆ, ಈ ಕೆಲಸದ ಗುತ್ತಿಗೆ ಪಡೆದವರು ಇಂತಹ ಕೆಲಸ ಮಾಡಿದ್ದಾರೆ. ಅದು ಸರ್ಕಾರದ ಗಮನದಲ್ಲಿದೆ. ಅವರ ಮೇಲೆ ಖಂಡಿತ ಕ್ರಮ ಜರುಗಿಸುತ್ತೇವೆ. ರಾಜ್ಯಾದ್ಯಂತ ಈ ಸಮಸ್ಯೆ ಇದೆ. ಕಾರ್ಮಿಕರಿಗೆ ಅನ್ಯಾಯವಾದಲ್ಲಿ ಅದನ್ನು ಸಹಿಸುವುದಿಲ್ಲ. ಕಾರ್ಮಿಕರಿಗೆ ಅನ್ಯಾಯವಾದಲ್ಲಿ ಕೂಡಲೇ ಇಲಾಖೆ ಗಮನಕ್ಕೆ ತರುವ ಕೆಲಸವೂ ಸಮಾಜದಿಂದ ನಡೆಯಬೇಕು ಎಂದು ಟ.ಎಂ. ಶಾಹಿದ್ ತೆಕ್ಕಿಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ವಿಠಲ ಚೌಗಲಾ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ತಾಪಂ ಅಧಿಕಾರಿಗಳಾದ ಪರಶುರಾಮ ಪೂಜಾರ, ಚಂದ್ರಶೇಖರ ಸೂಡಂಬಿ, ಮಂಜುನಾಥ ಬಾರ್ಕಿ, ಹೋಟೆಲ್ ಉದ್ಯಮಿಗಳಾದ ಆದರ್ಶ ಶೆಟ್ಟಿ, ಮಂಜಯ್ಯ ಶೆಟ್ಟಿ ಮೊದಲಾದವರು ಇದ್ದರು.