ಮಕ್ಕಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆ ಎಲ್ಲರ ಕರ್ತವ್ಯ-ಶೇಖರಗೌಡ

| Published : Dec 08 2024, 01:16 AM IST

ಮಕ್ಕಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆ ಎಲ್ಲರ ಕರ್ತವ್ಯ-ಶೇಖರಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳ ಹಕ್ಕುಗಳಿಗೆ ಚ್ಯುತಿಬಾರದಂತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು ಹೇಳಿದರು.

ಹಾವೇರಿ:ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳ ಹಕ್ಕುಗಳಿಗೆ ಚ್ಯುತಿಬಾರದಂತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಬಾಲನ್ಯಾಯ((ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫, ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಹಾಗೂ ಪೋಕ್ಸೋ ಕಾಯ್ದೆ-೨೦೧೨ರ ಕುರಿತು ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ ಜಾರಿಗೆ ತರಲಾಗಿದೆ. ಆದಾಗ್ಯೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಅಧಿಕಾರಿಗಳು ಕಾಯ್ದೆಗಳ ಕುರಿತು ತಿಳಿದುಕೊಳ್ಳಬೇಕು ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಉದ್ಯೋಗ ಅರಸಿ ವಲಸೆಹೋಗುವವರ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಕೊಡಿಸಬೇಕು. ಕೆಲವು ಶಾಲೆಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಹಾಜರಾತಿಯನ್ನು ತೋರಿಸಲಾಗುತ್ತಿದೆ. ಇದರಿಂದ ಆ ಮಗು ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತವಾಗುತ್ತದೆ. ಹಾಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸುವ ಕೆಲಸವಾಗಬೇಕು ಎಂದು ಹೇಳಿದರು.ರಾಜ್ಯ ಮಕ್ಕಳ ರಕ್ಷಣಾ ಆಯೋಗವು, ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಚಾರಣೆ ನಡೆಸುವುದು, ಮಕ್ಕಳಿಗಾಗಿ ಇರುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡುವುದು ಹಾಗೂ ಮಕ್ಕಳ ಪಾಲನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಜವಾಬ್ದಾರಿ ಹೊಂದಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಮಕ್ಕಳ ಮಾನಸಿಕ, ದೈಹಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಸಮಾಜ, ಹಾಗೂ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಬೇಕು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರ ಉಚಿತ ಶಿಕ್ಷಣ, ಕ್ಷೀರಭಾಗ್ಯ, ಬಿಸಿಯೂಟ, ಸಮವಸ್ತ್ರ, ಶೂ ನೀಡಲಾಗುತ್ತಿದೆ ಹಾಗೂ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಬಡತನ, ಅನಕ್ಷರತೆ ಕಾರಣದಿಂದ ಬಾಲ್ಯವಿವಾಹ, ಬಾಲ ಕಾರ್ಮಿಕರನ್ನು ಕಾಣಬಹುದು. ಇಂತಹ ಪ್ರಕರಣಗಳಲ್ಲಿ ಪೋಷಕರಿಗೆ ಸರಿಯಾದ ತಿಳುವಳಿಕೆ ನೀಡುವ ಮೂಲಕ ಶಿಕ್ಷಣದ ಮಹತ್ವ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಮಾನವ ಸೂಚ್ಯಾಂಕದಲ್ಲಿ ೩೧ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ೨೫ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಆರ್ಥಿಕ ಬೆಳೆವಣಿಗೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಪ್ರಗತಿ ಸಾಧಿಸಲು ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ವಯಸ್ಕರರಿಗಿಂತ ಮಕ್ಕಳ ದುರ್ಬಳಕೆ ಹಾಗೂ ತಾರತಮ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರು, ಪೋಕ್ಸೋ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡುಸುವುದು ಅಗತ್ಯವಾಗಿದೆ. ಮಕ್ಕಳ ಬಗೆಗಿನ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಕಾನೂನುಗಳು ಇರುವುದು ತಪ್ಪು ಮಾಡಿದರಿಗೆ ಶಿಕ್ಷೆ ಕೊಡಲು, ಆದರೆ ಉಳಿದವರಿಗೆ ಕಾನೂನಿನ ಭಯ ಇರಬೇಕು ಎಂದು ಹೇಳಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೆಲಸ ಮಾತ್ರವಲ್ಲ. ಎಲ್ಲರ ಜವಾಬ್ದಾರಿಯಾಗಿದೆ. ಎಲ್ಲ ಕಾನೂನುಗಳ ಅನುಷ್ಠಾನದಲ್ಲಿ ಎಲ್ಲ ಇಲಾಖೆಗಳ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಎಲ್ಲ ರಂಗದ ಶಿಕ್ಷಣ ಸಿಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮ ಸಭೆ ಸರಿಯಾಗಿ ನಡೆಯಬೇಕು. ಈ ಸಭೆಯಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಸಂಬಂಧಪಟ್ಟವರು ಸಮನ್ವಯದಿಂದ ಕೆಲಸಮಾಡುವುದರ ಜೊತೆಗೆ ಕಾಯ್ದೆಗಳ ಉಲ್ಲಂಘನೆ ತಡೆಯಬಹುದು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ೨೪*೭ ಕಾರ್ಯನಿರ್ವಸುತ್ತಿದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಠಾಣೆಗಳಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣ ಮಾಡಲಾಗಿದೆ. ಪೊಲೀಸ್ ಇಲಾಖೆ ಸದಾ ಮಕ್ಕಳ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.ಕೊಪ್ಪಳದ ಯುನಿಸೆಫ್ ಕಾರ್ಯಕ್ರಮ ಯೋಜನಾ ವ್ಯವಸ್ಥಾಪಕ ಹರೀಶ ಜೋಗಿ ಅವರು ಮಕ್ಕಳ ಹಕ್ಕುಗಳ ವಿವಿಧ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆಗಳ ಪ್ರಚಾರ ಫಲಕ ಅನಾವರಣಗೊಳಿಸಲಾಯಿತು ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಸ್ವಾಗತಿಸಿದರು. ಮಂಗಳ ಅಳಗುಂಡಿ ಕಾರ್ಯಕ್ರಮ ನಿರೂಪಸಿದರು. ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ ವಂದಿಸಿದರು.