ಪರಿಸರ, ಜಲಮೂಲಗಳ ರಕ್ಷಣೆ ಎಲ್ಲರ ಕರ್ತವ್ಯ

| Published : Feb 06 2025, 12:15 AM IST

ಸಾರಾಂಶ

ನಮ್ಮ ಪೂರ್ವಜರು ಪ್ರಕೃತಿಯನ್ನು ದೇವರಂತೆ ಕಾಣುತ್ತಿದ್ದರು. ನೀರಿಗಾಗಿ ಸಮಸ್ಯೆಯಾಗದಂತೆ ಕಲ್ಯಾಣಿಗಳನ್ನು, ಬಾವಿಗಳನ್ನು, ಕೆರೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಈ ಜಲಮೂಲಗಳಿಂದ ಶುದ್ದವಾದ ಹಾಗೂ ಆರೋಗ್ಯಕರವಾದ ನೀರು ಸಿಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಶುದ್ದ ಕುಡಿಯುವ ನೀರನ್ನು ದುಡ್ಡು ಕೊಟ್ಟು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮನುಷ್ಯರ ದುರಾಸೆಯೇ ಕಾರಣವಾಗಿದೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದರ ಜೊತೆಗೆ ನಮ್ಮ ಪೂರ್ವಿಕರು ಕಟ್ಟಿಸಿದಂತಹ ಕಲ್ಯಾಣಿಗಳು, ಕೆರೆಗಳು ಸೇರಿದಂತೆ ಇತರೆ ಜಲಮೂಲಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂವರ್ಧಿನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ತಿಳಿಸಿದರು.

ಯೂತ್ ಫಾರ್ ಸೇವಾ, ಸಂವಂರ್ಧಿನಿ ಸಂಸ್ಥೆ ಹಾಗೂ ವಾಹಿನಿ ಅಭಿವೃದ್ದಿ ಸಂಸ್ಥೆ ರವರುಗಳ ಸಹಯೋಗದಲ್ಲಿ ಮೈಂಡ್ ಟಿಕಲ್ ಎಂಬ ಎಂ.ಎನ್.ಸಿ ಕಂಪನಿಯ ಆರ್ಥಿಕ ಸಹಾಯದೊಂದಿಗೆ ಪಟ್ಟಣದ ಬಿಳಿಗಿರಿ ರಂಗನ ಬಾವಿ ಕಲ್ಯಾಣಿ ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಲಮೂಲ ಸಂರಕ್ಷಣೆ ಅಗತ್ಯ

ನಮ್ಮ ಪೂರ್ವಜರು ಪ್ರಕೃತಿಯನ್ನು ದೇವರಂತೆ ಕಾಣುತ್ತಿದ್ದರು. ನೀರಿಗಾಗಿ ಸಮಸ್ಯೆಯಾಗದಂತೆ ಕಲ್ಯಾಣಿಗಳನ್ನು, ಬಾವಿಗಳನ್ನು, ಕೆರೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಈ ಜಲಮೂಲಗಳಿಂದ ಶುದ್ದವಾದ ಹಾಗೂ ಆರೋಗ್ಯಕರವಾದ ನೀರು ಸಿಗುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಶುದ್ದ ಕುಡಿಯುವ ನೀರನ್ನು ದುಡ್ಡು ಕೊಟ್ಟು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮನುಷ್ಯರ ದುರಾಸೆಯೇ ಕಾರಣವಾಗಿದೆ. ಆದ್ದರಿಂದ ನಾವೆಲ್ಲರೂ ಪರಿಸರ ಹಾಗೂ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕು ಎಂದರು.

ಬಳಿಕ ಯೂತ್ ಫಾರ್ ಸೇವಾ ಸಂಸ್ಥೆಯ ಸಿ.ಎಸ್.ಆರ್ ಫಂಡ್ ಮ್ಯಾನೇಜರ್ ಮಂಜುನಾಥ್ ಮಾತನಾಡಿ, ಯೂತ್ ಫಾರ್ ಸೇವಾ ಸಂಸ್ಥೆ ಶಿಕ್ಷಣ, ಪರಿಸರ, ಜೀವನೋಪಾಯ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಇಡೀ ದೇಶದ ಹಲವು ಕಡೆ ಕೆಲಸ ಮಾಡುತ್ತಿದೆ. ಈಗಾಗಲೇ ಯೂತ್ ಫಾರ್ ಸೇವಾ ಸಂಸ್ಥೆಯ ವತಿಯಿಂದ ರಾಜ್ಯದ ಹಲವು ಕಲ್ಯಾಣಿಗಳನ್ನು ಪುನಃಚ್ಚೇತನ ಗೊಳಿಸಲಾಗಿದೆ ಎಂದರು.

ಕಲ್ಯಾಣಿಗಳ ಪುನಶ್ಚೇತನ

ಈ ಕಾರ್ಯಕ್ಕೆ ಸ್ಥಳೀಯ ವಾಹಿನಿ ಸಂಸ್ಥೆ ತುಂಬಾನೆ ಸಹಕಾರಿ ನೀಡುತ್ತಿದೆ. ಜೊತೆಗೆ ಹಲವು ಎಂ.ಎನ್.ಸಿ ಕಂಪನಿಗಳು, ಸ್ವಯಂ ಸೇವಾ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದಾಗಿ ನಮ್ಮೊಂದಿಗೆ ಕೈ ಜೋಡಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲ್ಯಾಣಿಗಳ ಪುನಃಚ್ಚೇತನ ಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಇದೇ ಸಮಯದಲ್ಲಿ ವಾಹಿನಿ ಅಭಿವೃದ್ದಿ ಸಂಸ್ಥೆಯ ಸುರೇಶ್ ಈಗಾಗಲೇ ತಾಲೂಕಿನ ಹಲವು ಕಲ್ಯಾಣಿಗಳು ಪುನಶ್ಚೇತನಗೊಳಿಸಲಾಗಿದೆ. ಕೆಪಿಐಟಿ ಎಂಬ ಕಾರ್ಪೋರೇಟ್ ಕಂಪನಿ ಹಾಗೂ ಮೈಂಡ್ ಟಿಕಲ್ ಎಂಬ ಕಾರ್ಪೋರೇಟ್ ಕಂಪನಿಗಳ ಸಹಕಾರದಿಂದ ಈ ಮಹತ್ತರ ಕಾರ್ಯ ನಡೆದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಸಸಿ ನೆಡುವ ಕಾರ್ಯಕ್ರಮ

ಈ ವೇಳೆ ಪಟ್ಟಣದ ಬಿಳಿಗಿರಿ ರಂಗನ ದೇವಾಲಯದ ಆವರಣದಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು. ಈ ಸಮಯದಲ್ಲಿ ಸಂವರ್ಧಿನಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಗಿರಿಜಾ, ಪ್ರಾಜೆಕ್ಟ್ ಆಫೀಸರ್ ಅಮೋದ್ ಸೇರಿದಂತೆ ಕಲ್ಯಾಣಿಗಳ ವ್ಯವಸ್ಥಾಪಕ ಮಂಡಳಿ ಸದಸ್ಯರು ಸೇರಿದಂತೆ ಹಲವರು ಇದ್ದರು.