ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಸುಮಾರು ೨೦ ವರ್ಷಗಳ ಹಿಂದೆ ಜಾರಿಗೆ ಬಂದಿರುವ ಮಹಿಳಾ ದೌರ್ಜನ್ಯ ತಡೆ ಕಾಯ್ದೆಯಡಿ ಮಹಿಳೆಯರಿಗೆ ರಕ್ಷಣೆ, ವಸತಿ ಹಕ್ಕು, ಜೀವನಾಂಶ ಹಕ್ಕು ಮತ್ತು ಪರಿಹಾರ ಪಡೆಯುವ ಹಕ್ಕು ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ತಿಳಿಸಿದರು.ನಗರದ ತಾಪಂ ಸಭಾಂಗಣದಲ್ಲಿ ನಡೆದ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಸದರಿ ಕಾಯಿದೆ ಜಾರಿಗೆ ಶಿಶು ಅಭಿವೃದ್ದಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ವಕೀಲರ ಪಾತ್ರ ಬಹಳಷ್ಟಿದ್ದು, ಕೌಟುಂಬಿಕ ಹಿಂಸೆಯಿಂದ ಶೋಷಣೆಗೆ ಒಳಗಾದ ಮಹಿಳೆಯರನ್ನು ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದಲೇ ಈ ಕಾನೂನು ಅನುಷ್ಠಾನ ಮಾಡುವ ಭಾಗೀದಾರ ಇಲಾಖೆಗಳ ಅಧಿಕಾರಿಗಳು ಮಹಿಳಾ ದೌರ್ಜನ್ಯ ತಡೆ ಕಾಯಿದೆಯ ಕುರಿತು ಅರಿತುಕೊಳ್ಳಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.ಬಾಲ್ಯವಿವಾಹ ತಡೆಗಟ್ಟಬೇಕು
ಬಾಲ್ಯವಿವಾಹ ಸಹಾ ಕೌಟುಂಬಿಕ ದೌರ್ಜನ್ಯಕ್ಕೆ ಒಂದು ಕಾರಣವಾಗಿದೆ, ಈ ಹಿನ್ನೆಲೆಯಲ್ಲಿ ಭಾಗೀದಾರ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ನಡೆಯುವುದನ್ನು ಪ್ರಮುಖ ಜವಾಬ್ದಾರಿಯನ್ನಾಗಿ ನಿರ್ವಹಿಸಬೇಕು. ಸಮಾಜಕ್ಕೆ ಮಾರಕವಾಗಿರುವ ಬಾಲ್ಯವಿವಾಹ ತಡೆಗಟ್ಟುವಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಶು ಅಭಿವೃದ್ದಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹೊಣೆಯರಿತು ಕೆಲಸ ಮಾಡಬೇಕು, ವಿಷಯ ಗಮನಕ್ಕೆ ಬರುತ್ತಿದ್ದಂತೆ ತಡೆಯಲು ಮುಂದಾಗುವ ಮೂಲಕ ಆ ಹೆಣ್ಣು ಮಗುವನ್ನು ರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.ಹೆಣ್ಣು ಮಕ್ಕಳಿಗೂ ಶಿಕ್ಷಣದ ಹಕ್ಕು ಇದೆ, ಅಂತಹ ಹಕ್ಕಿಗೆ ಚ್ಯುತಿ ತಂದು ೧೮ ವರ್ಷ ವಯಸ್ಸಿಗೆ ಮುನ್ನವೇ ಬಾಲ್ಯವಿವಾಹ ಮಾಡುವುದು ಅಪರಾಧ ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಂಡ ಪೋಷಕರು ಸೇರಿದಂತೆ ಎಲ್ಲರಿಗೂ ಶಿಕ್ಷೆಯಾಗುತ್ತದೆ. ಬಾಲ್ಯವಿವಾಹದಿಂದಾಗಿ ಸಣ್ಣ ವಯಸ್ಸಿಗೆ ತಾಯಿಯಾಗಿ ಹುಟ್ಟುವ ಮಗು ಅನಾರೋಗ್ಯ ಪೀಡಿತವಾಗುತ್ತದೆ, ಆಟ, ಶಿಕ್ಷಣದ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿಯನ್ನು ಬಲವಂತವಾಗಿ ಹೆಗಲಿಗೆ ಹಾಕುಗ ಇಂತಹ ಸಾಮಾಜಿಕ ಪೀಡೆಗೆ ಕೊನೆಯಾಡುವ ಹೊಣೆ ಎಲ್ಲರದ್ದಾಗಿದೆ ಎಂದರು.
ಕಾನೂನು ಸೌಲಭ್ಯ ಪಡೆಯಿರಿಕಾರ್ಯಾಗಾರದಲ್ಲಿ ನೀಡುವ ಮಾಹಿತಿಯನ್ನು ಪರಿಣಾಮಕಾರಿಯಾಗಿ ಪಡೆದು ತಮ್ಮ ಕೆಲಸದ ಸ್ಥಳಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದ ಅವರು, ಇದೇ ಸಂದರ್ಭದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತಿಳಿಸಿಕೊಟ್ಟರು.ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ವಿವಿಧ ಇಲಾಖೆಗಳಲ್ಲಿ, ಕೃಷಿ ಕಾರ್ಮಿಕರಾಗಿ ದುಡಿಯುವ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಅದರ ಕುರಿತು ದೂರು ನೀಡುವಂತೆ ಕ್ರಮವಹಿಸಬೇಕು, ದೌರ್ಜನ್ಯ ತಡೆಗೆ ಸಮಾಜವೇ ಜತೆಯಾಗಿ ನಿಲ್ಲಬೇಕು ಎಂದರು.ಪೊಲೀಸರ ಜವಾಬ್ದಾರಿ ಮುಖ್ಯ
ಡಿವೈಎಸ್‌ಪಿ ನಾಗ್ತೆ ಮಾತನಾಡಿ, ಕೌಟುಂಬಿಕ ದೌರ್ಜನ್ಯ ಕಾಯಿದೆ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಅತಿ ಮಹತ್ವದ್ದಾಗಿದೆ, ಮಹಿಳೆಯರು ಮಕ್ಕಳ ಮೇಳೆ ನಡೆಯುವ ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಸದಾ ಸಿದ್ದವಿದ್ದು, ಕಾಯಿದೆ ಅನುಷ್ಠಾನದಲ್ಲಿ ಕೆಲಸ ಮಾಡಬೇಕು. ಸದರಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಜೆ.ರೋಹಿತ್, ಗೌರಮ್ಮ ಮಾಹಿತಿ ನೀಡಿ, ಮಹಿಳಾ ದೌರ್ಜನ್ಯ ತಡೆ ಮತ್ತು ಕಾಯಿದೆ ಅನುಷ್ಟಾನದ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎನ್.ಬೈರರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಡಿ.ವಿನೋದ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.