ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ ಕನ್ನಡ ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ. ಕನ್ನಡ ಸಾಹಿತ್ಯವು ಕನ್ನಡ ಭಾಷೆ ಬೆಳವಣಿಗೆಯ ಜೊತೆಗೆ ಕನ್ನಡಿಗರ ಆತ್ಮಾಭಿಮಾನ ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಉಳ್ಳೂರು ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಸಿಗಂದೂರೆಶ್ವರಿ ಶಿಕ್ಷಣ ಸಂಸ್ಥೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ಸಾಗರ ತಾಲೂಕುಮಟ್ಟದ 12ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡದ ಸಾಹಿತಿಗಳು. ಕನ್ನಡದ ನೆಲಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಗರಿಮೆ ಇದೆ. ಇಲ್ಲಿ ಆದರ್ಶವಿದೆ, ಬದುಕಿನ ಸ್ಫೂರ್ತಿ ಇದೆ. ಸಾಂಸ್ಕೃತಿಕ ಹಿನ್ನೆಲೆ ಇದೆ. ನಿತ್ಯಸತ್ಯವನ್ನು ಸಾರುವ ಹೆಗ್ಗಳಿಕೆ ಕನ್ನಡ ಸಾಹಿತ್ಯಕ್ಕಿದೆ. ನಮ್ಮನ್ನು ನಾವು ಎಚ್ಚೆತ್ತುಕೊಳ್ಳುವ ಕೆಲಸ ಕನ್ನಡದ ಮೂಲಕ ಆಗಬೇಕಾಗಿದೆ. ರಾಜ್ಯದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚಿನ ಕೆಲಸ ಆಗುತ್ತಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ ಎನ್ನುವುದು ವಿಶೇಷ ಸಂಗತಿ. ಶಿವಮೊಗ್ಗ ಜಿಲ್ಲೆ ಹಾಗೂ ಸಾಗರ ತಾಲೂಕಿಗೆ ತನ್ನದೇ ಆದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಂಪು ಇದೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಮಕ್ಕಳ ಸಾಹಿತ್ಯ ಪ್ರತಿಭೆಯನ್ನು ಗುರುತಿಸುತ್ತಿರುವುದು ಅಭಿನಂದಾರ್ಹ ಸಂಗತಿ ಎಂದು ಹೇಳಿದರು.
ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಹಿತ್ಯದ ಹೊಸ ಅರಿವು ಮೂಡಿಸಲಾಗುತ್ತಿದೆ. ನಮ್ಮ ಮುಂದೆ ಹೊಸ ಪೀಳಿಗೆ ಬರುತ್ತಿರುವುದು ಅಭಿನಂದನಿಯ. ಪೋಷಕರು, ಶಿಕ್ಷಕರು ಮಕ್ಕಳಲ್ಲಿರುವ ಸಾಹಿತ್ಯ ಮನಸ್ಸುಗಳನ್ನು ಹೊರತರುವ ಕೆಲಸ ಮಾಡಬೇಕು ಎಂದು ಹೇಳಿದರು.ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ದಿಕ್ಸೂಚಿ ಮಾತುಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ರಕ್ಷಿತಾ ಪಿ. ಕೆಲುವೆ, ಕ್ಷೇತ್ರ ಶಿಕ್ಷಣಾಧಿಕಾರಿ ಈ.ಪರಶುರಾಮಪ್ಪ, ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಬಿಳಿಗಲ್ಲೂರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಕೆ., ಮಂಕಳಲೆ ಸಂತ ಜೋಸೆಫ್ ಶಾಲೆ ಮುಖ್ಯಶಿಕ್ಷಕಿ ತೆರೆಸಾ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಸಿರಿವಂತೆ. ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಪರಮೇಶ್ವರ ಕರೂರು, ಪೂರ್ಣಿಮಾ ಕರೂರು, ಶ್ರೀಕಾಂತ ಬಿ, ಬಸವರಾಜ್ ಪಿ, ವಿಜಯಕುಮಾರ್ ಎಂ.ಪಿ, ವಿನಯ್ ವಿ.ಎಸ್, ವಿದ್ಯಾಲೇಖ ಜೆ.ಜಿ, ಪ್ರಭುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಲಿವಿಯಾ ಸ್ವಾಗತಿಸಿದರು. ಅಂಬರ ನಿರೂಪಿಸಿ, ಅಂಕಿತ ವಂದಿಸಿದರು.- - -
ಬಾಕ್ಸ್ ದ್ವೀಪ ಜನರ ಶಾಪ ವಿಮೋಚನೆಯಾಗಲಿ: ಸಮ್ಮೇಳನಾಧ್ಯಕ್ಷೆ 12ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಪಿ. ಮಾನ್ವಿ ಕರೂರು ಮಾತನಾಡಿ, ಪ್ರಾಕೃತಿಕ ಸಂಪತ್ತಿನ ನೆಲೆಯಾಗಿರುವ ಸಾಗರ ತಾಲೂಕಿನ ಹಿನ್ನೀರಿನ ಪ್ರದೇಶದ ಜನರು ನಾಡಿಗೆ ಬೆಳಕು ನೀಡಿದ್ದಾರೆ. ಆದರೆ ಅವರ ಬದುಕು ಇನ್ನೂ ಸಂಕಷ್ಟದಲ್ಲಿದೆ. ಮಡೆನೂರು ಹಾಗೂ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದಿಂದಾಗಿ 142 ದುರ್ಗಮ ಹಳ್ಳಿಗಳನ್ನು ಒಳಗೊಂಡಿರುವ ದ್ವೀಪ ಪ್ರದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಲೂ ಅನೇಕ ಹಳ್ಳಿಗಳಿಗೆ ರಸ್ತೆಗಳಿಲ್ಲ, ವಿದ್ಯುತ್ ಇಲ್ಲ, ಸರಿಯಾದ ಆಸ್ಪತ್ರೆಗಳಿಲ್ಲ. ದ್ವೀಪ ಪ್ರದೇಶದ 52 ಶಾಲೆಗಳಲ್ಲಿ ಇಂದಿಗೂ ಕಾಯಂ ಶಿಕ್ಷಕರಿಲ್ಲ. ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ದ್ವೀಪ ಪ್ರದೇಶದ ಜನರ ಬದುಕಿಗೆ ಶಾಪ ವಿಮೋಚನೆ ಆಗಬೇಕಾಗಿದೆ ಎಂದು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.- - - -3ಕೆ.ಎಸ್.ಎ.ಜಿ.2:
ಸಾಗರ ತಾಲೂಕುಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ವಿದ್ಯಾರ್ಥಿನಿ ಮಾನ್ಯ ಉದ್ಘಾಟಿಸಿದರು.