ಪ್ರಧಾನಿಯಿಂದ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ರಕ್ಷಣೆ: ಶೆಟ್ಟರ

| Published : Feb 28 2024, 02:38 AM IST

ಸಾರಾಂಶ

, ಮೋದಿ ಅವರು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಖರ್ಗೆ ಟೀಕೆಗೆ ಅರ್ಥವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಮುದ್ರ ಆಳದಲ್ಲಿ ಪ್ರಧಾನಿ ನರೇಂದ್ರ ಮೋದಿ ನವಿಲುಗರಿ ನೆಟ್ಟರೆ ಅದು ಚಿಗುರುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮೋದಿ ಅವರು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಖರ್ಗೆ ಟೀಕೆಗೆ ಅರ್ಥವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ದೇಶದ ಆರಾಧನೆ ಮಾಡುವ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.

ಕಳಸಾ ಬಂಡೂರಿ ಯೋಜನೆ ವಿಳಂಬಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮನೋಹರ್ ಪರಿಕರ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿದ್ದೆ. ಅವರ ಮನವೋಲಿಕೆ ಕೂಡ ಆಗಿತ್ತು. ಆದರೆ ಆಗ ಗೋವಾ ಕಾಂಗ್ರೆಸ್‌ನವರೇ ವಿರೋಧಿಸಿದ್ದರು. ಅಲ್ಲಿನ ಕಾಂಗ್ರೆಸ್ ನಾಯಕರಿಗೆ ತಿಳಿಸಿ ಎಂದು ಕರ್ನಾಟಕದ ಕಾಂಗ್ರೆಸ್‌ ನಾಯಕರಿಗೂ ಹೇಳಿದ್ದೆ ಎಂದರು.

ಕೆಲವರಿಂದಾಗಿ ಇದು ವಿಳಂಬವಾಗುತ್ತಿದ್ದು, ಅದನ್ನು ಸರಿ ಮಾಡುವ ಕೆಲಸ ಮಾಡುತ್ತೇವೆ. ಗೋವಾ ವಿದ್ಯುತ್ ಯೋಜನೆಗೆ ಅರಣ್ಯ ನಾಶವಾಗುತ್ತದೆಯೆಲ್ಲ ಎಂಬ ಪ್ರಶ್ನೆಗೆ ಇದೇ ಮಾಹಿತಿ ಇಟ್ಟುಕೊಂಡು ನಾವು ಫೈಟ್‌ ಮಾಡಬೇಕು. ವಿದ್ಯುತ್ ಯೋಜನೆಗೆ ಅನುಮತಿ ಕೊಡುವುದಾದರೆ, ಮಹದಾಯಿ ಯೋಜನೆಗೆ ಅನುಮತಿ ಬೇಡಿಕೆ ಇಡುತ್ತೇವೆ ಎಂದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಜೈ ಶಂಕರ್ ಸದ್ಯ ರಾಜ್ಯಸಭಾ ಸದಸ್ಯರಲ್ಲ. ಹೀಗಾಗಿ ಲೋಕಸಭೆಗೆ ಸ್ಪರ್ಧಿಸಬಹುದು. ಆದರೆ, ಕರ್ನಾಟಕದಿಂದಲೇ ಸ್ಪರ್ಧಿಸುತ್ತಾರೆ ಅಂತ ಹೇಳಲು ಬರಲ್ಲ. ಬೇರೆ ರಾಜ್ಯಗಳಿಂದಲೂ ಸ್ಪರ್ಧಿಸಬಹುದು ಎಂದಷ್ಟೇ ಹೇಳಿದರು.

ಮೊನ್ನೆ ಖಾಸಗಿ ಹೋಟೆಲ್‌ನಲ್ಲಿ ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡರ ಸಭೆ ನಡೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲಮುಖಂಡರನ್ನು ಮರುಸೇರ್ಪಡೆ ಕುರಿತು ಚರ್ಚೆ ನಡೆದಿದೆ. ನಾಳೆ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ 90ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಎಲ್ಲ ವಿವಾದಕ್ಕೂ ತೆರೆಬೀಳಲಿದೆ ಎಂದರು.