ಸಾರಾಂಶ
- ಕಾರ್ಯಾಗಾರದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣ ಕೊಳ್ಳ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ರಸ್ತುತ ಹಲವಾರು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಮಕ್ಕಳಿಗಿರುವ ಮಾನಸಿಕ, ಅರ್ಥಿಕ, ಕೌಟುಂಬಿಕ ಸಮಸ್ಯೆಗಳ ಅರಿತು ಶಿಕ್ಷಣದ ಜೊತೆಗೆ ಅವರ ರಕ್ಷಣೆ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಅಪರ್ಣ ಎಂ. ಕೊಳ್ಳ ಹೇಳಿದರು.ನಗರದ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಆಂದೋಲನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಕುಟುಂಬದ ಕಣ್ಣು. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಸರಿಯಾದ ಅಂಕಿ-ಅಂಶದ ಕೊರತೆಯಿದೆ. ಇತ್ತೀಚಿನ ದಿನಗಳಲ್ಲಿ ಫೋಕ್ಸೋ, ಬಲತ್ಕಾರ, ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಇದನ್ನು ತಡೆಗಟ್ಟಿ 2030ರ ವೇಳೆಗೆ ಬಾಲ್ಯ ವಿವಾಹ ಮುಕ್ತ ಭಾರತವನ್ನಾಗಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ಅಭಿಯಾನ ಕೂಡ ಇದೆ. ಮಕ್ಕಳಿಗೆ ಸರಿಯಾದ ಶಿಕ್ಷಣದ ಜೊತೆಗೆ ರಕ್ಷಣೆ ಬೇಕು. ಶಿಕ್ಷಕರು ಶಾಲೆಗಳಲ್ಲಿ ಪೋಷಕರ ಸಭೆ ಕರೆದು ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ತಿಳಿಸಬೇಕು. ಹಾಗೂ ಮಕ್ಕಳ ಮಾನಸಿಕ ಸ್ಥಿತಿಗತಿಗಳನ್ನು ಅರಿಯಲು ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಮಾತ್ರ ಸಾಧ್ಯ ಎಂದ ಅವರು, ಜಿಲ್ಲೆಯಲ್ಲಿ ಅನುಮತಿ ಇಲ್ಲದ ಕೋಚಿಂಗ್ ಸೆಂಟರ್‌ಗಳು ಹೆಚ್ಚುತ್ತಿದ್ದು, ಇವುಗಳ ಮಾಹಿತಿ ನೀಡಲು ತಿಳಿಸಿದರು.ಹಿರಿಯ ಸಿವಿಲ್ ನ್ಯಾಯಧೀಶ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನ್ನು ನಾವು ಸರ್ಕಾರಿ ಶಾಲೆಗೆ ಓದಲು ಕಳುಹಿಸುತ್ತಿಲ್ಲ, ಖಾಸಗಿ ಶಾಲೆಗಳಲ್ಲಿ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಸೌಲಭ್ಯಗಳು ಹೆಚ್ಚು ಸಿಗುತ್ತಿವೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಆಂದೋಲನಗಳನ್ನು ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು. ತಂದೆ-ತಾಯಿಗಳು ತಮ್ಮ ನೌಕರಿ ಕಡೆ ನೋಡದೇ ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದರು.
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಶಿಕ್ಷಕರಾದ ಡಿ.ನಾಗರಾಜ ಉಪನ್ಯಾಸ ನೀಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೋಟ್ರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ, ಅಥಣಿ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ಷಣ್ಮುಖಪ್ಪ ಇನ್ನಿತರರು ಉಪಸ್ಥಿತರಿದ್ದರು.- - - -23ಕೆಡಿವಿಜಿ46:
ದಾವಣಗೆರೆಯಲ್ಲಿ ನಡೆದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಆಂದೋಲನ ತರಬೇತಿ ಕಾರ್ಯಾಗಾರವನ್ನು ಅಪರ್ಣ ಎಂ. ಕೊಳ್ಳ ಉದ್ಘಾಟಿಸಿದರು.