ಗೃಹ ಸಚಿವರಿಂದಲೇ ಆರೋಪಿಗಳಿಗೆ ರಕ್ಷಣೆ : ಆರೋಪ

| Published : Aug 15 2024, 01:48 AM IST

ಸಾರಾಂಶ

Protection of the accused by the Home Minister: Allegation

-ಪ್ರತಿಭಟನಾಕಾರರಿಂದ ಶಾಸಕರ ಕಚೇರಿಗೆ ಮುತ್ತಿಗೆ ಯತ್ನ: ಪೊಲೀಸ್ ಭದ್ರತೆ । ನಟ ಅಹಿಂಸಾ ಚೇತನ್‌, ಪರಶುರಾಮ್‌ ತಂದೆ, ಸಹೋದರ ಭಾಗಿ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರ ಠಾಣೆಯ ಪಿಎಸ್ಸೈ ಪರಶುರಾಮ್‌ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹಾಗೂ ಈ ಕುರಿತು ದಾಖಲಾದ ಪ್ರಕರಣದ ಆರೋಪಿಗಳಾದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಹಾಗೂ ಪುತ್ರ ಸನ್ನೀಗೌಡ ಬಂಧಿಸುವಂತೆ ಆಗ್ರಹಿಸಿ ವಿವಿಧ ದಲಿತ- ಪ್ರಗತಿಪರ ಸಂಘಟನೆಗಳು ಯಾದಗಿರಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದರು.

ನಗರದ ಮೈಲಾಪೂರ ಬೇಸ್‌ನಿಂದ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಗಾಂಧೀಚೌಕ್‌, ಕನಕ ವೃತ್ತ, ಡಾ. ಅಂಬೇಡ್ಕರ್‌ ಸರ್ಕಲ್‌, ಲಾಲ್‌ ಬಹಾದ್ದೂರ್ ಶಾಸ್ತ್ರಿ ವೃತ್ತ ಮಾರ್ಗವಾಗಿ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತಕ್ಕೆ ಆಗಮಿಸಿ, ಅಲ್ಲಿ ಸಮಾವೇಶಗೊಂಡರು. ಮಾರ್ಗ ಮಧ್ಯೆ, ಶಾಸ್ತ್ರಿ ಚೌಕ್‌ ಸಮೀಪವಿರುವ ಶಾಸಕ ಚೆನ್ನಾರೆಡ್ಡಿ ಅವರ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಪ್ರತಿಭಟಕಾರರನ್ನು ಪೊಲೀಸರು ತಡೆದರು.

ನಟ ಅಹಿಂಸಾ ಚೇತನ್‌, ಪರಶುರಾಮ್‌ ಅವರ ತಂದೆ ಜನಕಮುನಿ, ಸಹೋದರ ಹನುಮಂತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವೇ ದಲಿತರ ದಮನಕ್ಕೆ ಮುಂದಾಗಿದೆ. ಪರಶುರಾಮ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರ ಆರೋಪಿ ಶಾಸಕರ ರಕ್ಷಣೆಗೆ ನಿಂತಂತಿದೆ ಎಂದು ಪ್ರತಿಭಟನಾಕಾರರು ದೂರಿದರು.

ವರ್ಗಾವಣೆ ಕುರಿತು ತಮ್ಮನ (ಪರಶುರಾಮ್‌) ಜೊತೆ ಮಾತನಾಡಿದಾಗ, ಶಾಸಕರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಆಗಿಲ್ಲ ಎಂದು ಆತ ಖಿನ್ನತೆ ವ್ಯಕ್ತಪಡಿಸಿದ್ದ ಎಂದು ಪರಶುರಾಮ್‌ ಸಹೋದರ ಹನುಮಂತ ದೂರಿದರು.

ಸರ್ಕಾರಿ ಅಧಿಕಾರಿಯೊಬ್ಬನನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಬೇಕಾದ ಸಿಎಂ ಹಾಗೂ ಗೃಹಸಚಿವರು ಆರೋಪಿ ಶಾಸಕರನ್ನು ಪಕ್ಕಕ್ಕೆ ಕುಳ್ಳಿರಿಸಿಕೊಂಡು ಮಾತನಾಡುತ್ತಿರುವುದನ್ನು ನೋಡಿದರೆ, ಈ ಪ್ರಕರಣ ಮರೆ ಮಾಚುವ ಯತ್ನಗಳು ನಡೆಯುತ್ತಿವೆ.

ವಾಲ್ಮಿಕಿ ಹಗರಣದಲ್ಲಿ ಸಚಿವ ನಾಗೇಂದ್ರ ಕ್ಲೀನ್‌ ಚಿಟ್‌ ಕೊಡುವಂತೆ ಇಲ್ಲಿಯೂ ಎಸ್‌ಐಟಿ ರಚಿಸಿ ಪ್ರಕರಣಕ್ಕೆ ಅಂತ್ಯ ಹಾಡುವ ಯತ್ನಗಳು ನಡೆದಿವೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿ ತನಿಖೆ ಬದಲು ಇದನ್ನು ಕೇಂದ್ರ ಸರ್ಕಾರದ ಸಿಬಿಐಗೆ ವಹಿಸುವುದು ಸೂಕ್ತ ಎಂದು ನಟ ಅಹಿಂಸಾ ಚೇತನ್‌ ಆಗ್ರಹಿಸಿದರು.

ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನನ್ನ ಬಳಿ ಶಾಸಕ ಚೆನ್ನಾರೆಡ್ಡಿ ಬಂದಿದ್ದರು ಎಂದು ಹೇಳುವ ಗೃಹಸಚಿವರು ದಲಿತರ ರಕ್ಷಣೆಯ ವಿಚಾರದಲ್ಲಿ ಮೌನ ತಾಳಿರುವುದು ಅವರ ಕಾರ್ಯಕ್ಷಮತೆ ತೋರಿಸುತ್ತದೆ. ಆರೋಪಿಗಳಿಗೆ ಗೃಹ ಸಚಿವರೇ ರಕ್ಷಣೆ ನೀಡುತ್ತಿರುವಂತಿದೆ ಎಂದು ಆರೋಪಿಸಿದರು.

ಎರಡಿಂದ ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಯಿತು. ಸಿಬಿಐಗೆ ತನಿಖೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರ ಮೂಲಕ ಸಲ್ಲಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ ವೇಳೆ ನಗರದ ಮುಖ್ಯರಸ್ತೆಯಲ್ಲಿ ಬಿಗಿ ಪೊಲೀಸ್‌ ಪಹರೆ ಹಾಕಲಾಗಿತ್ತು.

ಹೆಬ್ಬಾಳ್‌ ವೆಂಕಟೇಶ್‌, ಮಲ್ಲಿಕಾರ್ಜುನ ಕ್ರಾಂತಿ, ಭೀಮುನಾಯಕ್‌, ಮರೆಪ್ಪ ಚಟ್ಟೇರಕರ್‌, ಹನುಮೇಗೌಡ, ಮಹೇಶ ಅನಪುರ, ಕಾಶೀನಾಥ್‌ ನಾಟೇಕಾರ್‌, ಪ್ರಭು, ಗೋಪಾಲ, ಶ್ರೀಕಾಂತ ಸುಂಗಲಕರ್‌ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ---------

ಫೋಟೊ:

-

14ವೈಡಿಆರ್‌9: ಬುಧವಾರ ಯಾದಗಿರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಅಹಿಂಸಾ ಚೇತನ್ ಮಾತನಾಡಿದರು.

-

14ವೈಡಿಆರ್‌8 : ಬುಧವಾರ ಯಾದಗಿರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮೃತ ಪರಶುರಾಮ್‌ ಅವರ ಸಹೋದರ ಹನುಮಂತ ಮಾತನಾಡಿದರು.

-

14ವೈಡಿಆರ್‌10 : ಪಿಎಸ್ಸೈ ಪರಶುರಾಮ್‌ ಶಂಕಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ವಹಸಿವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಪತ್ರವನ್ನು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

-

14ವೈಡಿಆರ್‌11 : ಯಾದಗಿರಿಯಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

-

14ವೈಡಿಆರ್‌12 : ಯಾದಗಿರಿ ಶಾಸಕ ಕಚೇರಿಗೆ ಮುತ್ತಿಗೆ ಯತ್ನ

---000---