ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಜಲ ಸಂರಕ್ಷಣೆ ಬಗ್ಗೆ ತಾತ್ಸಾರ ಮನೋಭಾವ ಹೊಂದಿದರೆ ಇಡೀ ಜೀವ ಸಂಕುಲಕ್ಕೆ ಇನ್ನಷ್ಟು ಕಂಟಕ ಎದುರಾಗುತ್ತದೆ. ಹಾಗಾಗಿ ಅವಸಾನದ ಅಂಚಿನಲ್ಲಿರುವ ಜಲ ಮೂಲಗಳ ಬಗ್ಗೆ ಕಾಳಜಿ ಮತ್ತು ರಕ್ಷಣೆ ಹೊಂದುವುದು ಅನಿವಾರ್ಯ ಎಂದು ನಿಸರಾಣಿ ಗ್ರಾಮದ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ದೀಪಕ್ ದೊಂಗಡೇಕರ್ ಹೇಳಿದರು.ಬುಧವಾರ ತಾಲೂಕಿನ ಮಳಲಗದ್ದೆ ಗ್ರಾಮದಲ್ಲಿ ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಪರ್ಯಾವರಣ ಸಂರಕ್ಷಣಾ ಗತಿವಿಧಿ, ಪರಿಸರ ಜಾಗೃತಿ ಟ್ರಸ್ಟ್, ಲಯನ್ಸ್ ಸಂಸ್ಥೆ, ವೃಕ್ಷ ಲಕ್ಷ ಆಂದೋಲನ, ತಾಪಂ ಸಹಯೋಗದಲ್ಲಿ ಹಮ್ಮಿಕೊಂಡ ದಂಡಾವತಿ ಜೀವವೈವಿಧ್ಯ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮಗೆ ನೀರು, ಆರೋಗ್ಯ, ಅನ್ನ ನೀಡುವ ನದಿ, ಕೆರೆ, ಹಳ್ಳ-ಕೊಳ್ಳಗಳು ನಮ್ಮ ತಾತ್ಸಾರ ಭಾವನೆಯಿಂದ ಅಮೂಲ್ಯ ಪರಿಸರ ಹಾಳುಗೆಡವುತ್ತಿದ್ದೇವೆ. ನದಿ ಮೂಲ ರಕ್ಷಣೆ ಜತೆಗೆ ಮಳೆ ತರಿಸುವ ಕಾಡಿನ ರಕ್ಷಣೆಗೂ ಮುಂದಾಗಬೇಕಿದೆ ಎಂದರು. ದಂಡಾವತಿ ಜೀವ ವೈವಿದ್ಯ ಅಭಿಯಾನ ವಿನೂತನ, ಅಗತ್ಯ ಮಾಹಿತಿ ಅರಿಯಲು ಸಹಕಾರಿಯಾಗಿದೆ. ನದಿ ಮೂಲಗಳ ಸಂರಕ್ಷಣೆಗೂ ನೆರವಾಗಿವೆ. ಬೆಳೆಯುವ ಮಕ್ಕಳಿಗೆ ಇಂತಹ ಅಭಿಯಾನ ಪ್ರಸ್ತುತದಲ್ಲಿ ತೀರಾ ಅವಶ್ಯವಿದೆ ಎಂದರು.ಸಾಹಿತಿ ರೇವಣಪ್ಪ ಬಿದರಗೆರೆ ಮಾತನಾಡಿ, ನದಿ ಉಗಮ ಮತ್ತು ಸಾಗುವ ದಾರಿಯೇ ವಿಸ್ಮಯ ಮತ್ತು ಕುತೂಹಲಕ್ಕೆ ಕಾರಣವಾಗುತ್ತದೆ. ನದಿ ಮತ್ತು ಮಲೆನಾಡಿನ ದಟ್ಟಾರಣ್ಯ ಅದೆಷ್ಟೋ ಕೌತುಕಗಳಿಗೆ ಕಾರಣವಾಗಿದ್ದರೂ ಅರಿಯಲು ನಿರ್ಲಕ್ಷಿಸುತ್ತೇವೆ. ಒಂದು ನದಿ, ಹಳ್ಳಗಳ ಅಥವಾ ಕೆರೆಗಳ ನೆಲೆ ಹಿನ್ನೆಲೆ ರೋಚಕವೆನಿಸಿದ್ದು, ಹನಿಹನಿಗೂಡಿದರೆ ಹಳ್ಳ ನುಡಿಗಟ್ಟು ಅದೆಷ್ಟು ಅರ್ಥಪೂರ್ಣ ಎನಿಸಿದೆ ಎಂದರು.
ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ದಂಡಾವತಿ ಜೀವ ವೈವಿದ್ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದಂಡಾವತಿ ನದಿ ಸೇತುವೆ ಕೆಳಗೆ ಹಾಗೂ ಜನವಸತಿ ಸನಿಹ ಇರುವ ಅನೇಕ ಕಡೆ ಯಥೇಚ್ಚ ತ್ಯಾಜ್ಯ ಸಂಗ್ರಹಣೆಯನ್ನು ನದಿಗೆ ಎಸೆಯಲಾಗುತ್ತಿದೆ. ಈ ಮೂಲಕ ನದಿ ಕಲುಷಿತಗೊಳಿಸುತ್ತಿದ್ದು, ನೀರು ಇಂಗುವಿಕೆ ಕುಗ್ಗುತ್ತಿದೆ. ಇಂತಹ ತ್ಯಾಜ್ಯ ಮಳೆಗಾಲದಲ್ಲಿ ಕೃಷಿ ಭೂಮಿಗೆ ಸೇರಿಕೊಂಡು ಬೆಳೆಯ ಕುಂಠಿತಕ್ಕೂ ಕಾರಣವಾಗುತ್ತದೆ. ಅದರಲ್ಲೂ ಅನೇಕ ಪರಿಸರ ಮಾರಕ ತ್ಯಾಜ್ಯಗಳು ನದಿ ತೀರದ ಪ್ರದೇಶಕ್ಕೆ ಹರಡುತ್ತಿವೆ. ಜಲಚರಗಳಿಗೂ ಇದು ಮಾರಕವಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಪ್ರಜ್ಞಾವಂತ ಪರಿಸರ ಪ್ರೇಮಿಗಳು ಕಾಳಜಿ ವಹಿಸಿ ನದಿ ಮತ್ತು ನದಿ ತೀರಗಳು ಕಲುಷಿತಗೊಳ್ಳುವುದನ್ನು ತಡೆಯಬೇಕಿದೆ ಎಂದರು.ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಆಯೋಜಕ ಪ್ರಶಾಂತ ಹುನವಳ್ಳಿ ಅವರು ಜೀವವೈವಿಧ್ಯ ದಾಖಲಾತಿ ನಡೆಸಿದರು. ಮಳಲಗದ್ದೆ ದೀಪಕ್ ಸಸ್ಯ ಪ್ರಬೇಧಗಳ ಪರಿಚಯ, ಅವುಗಳ ಬಳಕೆ, ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸುಧನ್ವ, ಸುಭಾನು ಬೀಜ ಸಂಗ್ರಹಣೆ ನಡೆಸಿದರು.