ನೀರು, ನೆಲ, ಪರಿಸರ ರಕ್ಷಣೆ ಎಲ್ಲರ ಕರ್ತವ್ಯ: ಶ್ರೀಗಳು

| Published : Mar 25 2024, 12:47 AM IST

ಸಾರಾಂಶ

ಸಮಾಜ ಸೇವೆ ಮಾಡುವ ವ್ಯಕ್ತಿಗಳು ಸಿಗುವುದು ಬಹಳ ವಿರಳ. ಶ್ರೀನಿವಾಸ ಹೆಬ್ಬಾರ್ ಸಮಾಜ ಸೇವೆಯನ್ನು ಧ್ಯೇಯನ್ನಾಗಿಟ್ಟುಕೊಂಡಿದ್ದಾರೆ.

ಶಿರಸಿ: ನೀರು, ನೆಲ, ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಜೀವಜಲ ಕಾರ್ಯಪಡೆ ಹಾಗೂ ಶ್ರೀನಿವಾಸ ಹೆಬ್ಬಾರ್ ಅವರ ಕಾರ್ಯ ನಾಡಿಗೇ ಮಾದರಿ ಎಂದು ಸ್ವಾದಿ ಜೈನ ಮಠದ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ‍್ಯವರ್ಯ ಸ್ವಾಮೀಜಿ ನುಡಿದರು.

ಭಾನುವಾರ ತಾಲೂಕಿನ ತಾಲೂಕಿನ ಸ್ವಾದಿ ದಿಗಂಬರ ಜೈನ ಮಠದಲ್ಲಿ ಮಾ. ೧೭ರಿಂದ ಆರಂಭವಾಗಿರುವ ಸಿದ್ಧಚಕ್ರ ಮಹಾಮಂಡಲ ಆರಾಧನಾ ಹಾಗೂ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಸಮಾಜ ಸೇವೆ ಮಾಡುವ ವ್ಯಕ್ತಿಗಳು ಸಿಗುವುದು ಬಹಳ ವಿರಳ. ಶ್ರೀನಿವಾಸ ಹೆಬ್ಬಾರ್ ಸಮಾಜ ಸೇವೆಯನ್ನು ಧ್ಯೇಯನ್ನಾಗಿಟ್ಟುಕೊಂಡಿದ್ದಾರೆ ಎಂದರು..

ನೀರಿನ ಅಭಾವ ಎಲ್ಲ ಕಡೆ ಕಂಡುಬರುತ್ತಿದ್ದು, ಬೆಂಗಳೂರು ಸೇರಿದಂತೆ ಮಹಾನಗರದಲ್ಲಿ ನೀರಿನ ಕೊರತೆಯಿಂದ ಜನರು ತೀವ್ರ ಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೀರು ವ್ಯರ್ಥ ಮಾಡಿದರೆ ದಂಡ ವಿಧಿಸುತ್ತಿದ್ದಾರೆ ಎಂದರು.

ಸ್ವಾದಿ ದಿಗಂಬರ ಜೈನ ಮಠವು ಬಹಳ ಪ್ರಾಚೀನ ಇತಿಹಾಸ ಹೊಂದಿದ್ದು, ಸ್ವಸ್ತೀಶ್ರೀ ಭಟ್ಟಾಕಲಂಕ ಸ್ವಾಮೀಜಿ ಈ ಪೀಠವನ್ನು ಸ್ಥಾಪನೆ ಮಾಡಿದ್ದಾರೆ. ಆದಿನಾಥ ತೀರ್ಥಂಕರರ ಬಸದಿ ನೋಡಿದರೆ ೩ ಶತಮಾನದ್ದು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಅದರ ಪುನರುಜ್ಜೀವನಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿನ ಶಾಸನಗಳನ್ನು ಗಮನಿಸಿದರೆ ೧,೩೦೦ ವರ್ಷದ ಪರಂಪರೆಯನ್ನು ತಿಳಿಸುತ್ತದೆ ಎಂದರು.

ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ ಮಹಾರಾಜ ಮತ್ತು ೧೦೮ ಪುಣ್ಯಸಾಗರ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀನಿವಾಸ ಹೆಬ್ಬಾರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಶ್ರೀಧರ ಉಪಾಧ್ಯೆ ಪ್ರತಿಷ್ಠಾಚಾರ್ಯ ಯಳವಟ್ಟಿ ಸಂಪಾದಕತ್ವದ "ಚತುರ್ವಿವಿಂಶತಿ ತೀರ್ಥಂಕರ ಆರಾಧನೆ " ಪುಸ್ತಕವನ್ನು ಡಾ. ಅಭಿಷೇಕ ಪಾಟೀಲ ಹುಬ್ಬಳ್ಳಿ, ರಾಜೇಂದ್ರ ಜೈನ ಸೋಂದಾ ರಚಿಸಿದ "ಗಣಧರವಲಯ ಆರಾಧನೆ " ಪುಸ್ತಕವನ್ನು ಸವಿತಾ ಅಶೋಕ ಸವದತ್ತಿ, ಝಂಜರವಾಡ, ಡಾ. ಎಚ್.ಡಿ. ಜಯಪದ್ಮಕುಮಾರ ಬೆಂಗಳೂರು ರಚಿಸಿದ "ಪುಣ್ಯಗಾಥೆ " ಪುಸ್ತಕವನ್ನು ಎಂ.ಎಸ್. ಮೃತ್ಯುಂಜಯ ಜೈನ್ ಬಿಡುಗಡೆಗೊಳಿಸಿದರು. "ಆಚಾರ್ಯ ಅಕಲಂಕದೇವ " ಪ್ರಶಸ್ತಿಯನ್ನು ಡಾ. ಮಹಾವೀರ ದಾನಿಕೊಂಡ ತೇರದಾಳ ಮತ್ತು "ಮುನಿಶ್ರೀ ೧೦೮ ಶಂಭವನಂದಿ ಮಹಾರಾಜ " ಪ್ರಶಸ್ತಿಯನ್ನು ಬ್ರಹ್ಮಚಾರಿಣಿ ಜಲಜಾ ಜೈನ್ ತುಮಕೂರು ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಅತಿಥಿಗಳಾಗಿ ಡಾ. ಪ್ರದ್ಮರಾಜ ಛಬ್ಬಿ ಮುಂಡಗೋಡ, ದೇವರಾಜ ಕೆಲ್ಲಾ, ಮಹಾವೀರ ಆಲೂರು ಶಿರಸಿ, ಶಾಂತರಾಜ ನೇಸಲಮನೆ ಬಿದರೂರು ಉಪಸ್ಥಿತರಿದ್ದರು. ಸಿ. ಕುಮದಾ ನಾಗಭೂಷಣ ಮೈಸೂರು ನಿರೂಪಿಸಿದರು.

ಕೆರೆಗೆ ಬಾಗಿನ ಅರ್ಪಣೆ: ಹೂಳು ತುಂಬಿ ಕೊರಚಲು ಗಿಡ ಬೆಳೆದಿದ್ದ ಪುರಾತನ ಜೈನ ಮಠದ ಕೆರೆಯನ್ನು ಅಭಿವೃದ್ಧಿಗೊಳಿಸಿದ ಶ್ರೀನಿವಾಸ ಹೆಬ್ಬಾರ್ ಅವರ ಮೂಲಕವೇ ಜೈನ ಮಠದ ಭಟ್ಟಾಕಲಂಕ ಭಟ್ಟಾಚಾರ‍್ಯಪಟ್ಟಾಚಾರ‍್ಯ ವರ್ಯ ಸ್ವಾಮೀಜಿ ಕೆರೆ ಪೂಜೆ ಮಾಡಿಸಿದರು. ಕೆರೆಯ ನೀರನ್ನು ಕುಂಭಕ್ಕೆ ತುಂಬಿಸಿಕೊಂಡು ಮಠದ ಸಭಾಂಗಣದ ಮೂಲಕ ಪಂಚ ವಾದ್ಯಗಳ ಮೂಲಕ ಬರಮಾಡಿಕೊಳ್ಳಾಯಿತು. ಹೇಮಾ ಹೆಬ್ಬಾರ್, ನಿವೇದಿತಾ ಹೆಬ್ಬಾರ್ ಅವರು ಕೆರೆಗೆ ಬಾಗಿನ ಅರ್ಪಿಸಿ ಪೂಜಿಸಿದರು.