ಸಾರಾಂಶ
ಆರ್‌ಪಿಎಫ್ ಸಿಬ್ಬಂದಿ ಅರ್ಪಣಾ ಅವರ ಸಮಯಪ್ರಜ್ಞೆಯಿಂದ ಮಹಿಳಾ ಪ್ರಯಾಣಿಕರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ವೈರಲ್ ಆಗುತ್ತಿದೆ.
ಉಡುಪಿ: ರೈಲಿನಿಂದ ಆಯತಪ್ಪಿ ಬಿದ್ದ ಮಹಿಳೆಯನ್ನು ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಮಹಿಳಾ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಮಂಗಳೂರು - ಮಾಡ್ಗಾವ್ ಪ್ಯಾಸೆಂಜರ್ ರೈಲು ಇಲ್ಲಿನ ಇಂದ್ರಾಣಿ ರೈಲ್ಪೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಬಾಗಿಲಲ್ಲಿ ನಿಂತಿದ್ದ ಮಹಿಳೆಯೊಬ್ಬರು ಆಯ ತಪ್ಪಿ ಕೆಳಗೆ ಪ್ಲಾಟ್‌ಫಾರಂನ ಅಂಚಿಗೆ ಬಿದ್ದರು. ತಕ್ಷಣ ಅಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ಧಾವಿಸಿ ರೈಲಿನ ಗಾಲಿಯಡಿಗೆ ಬೀಳಬಹುದಾಗಿದ್ದ ಮಹಿಳೆಯನ್ನು ಪ್ಲಾಟ್‌ಪಾರಂ ಮೇಲೆ ಎಳೆದುಕೊಂಡರು. ಅಷ್ಟರಲ್ಲಿ ಇನ್ನೊಬ್ಬ ಯುವಕ ಅವರಿಗೆ ಸಹಾಯ ಮಾಡಿದರು.ಈ ಸಾಹಸಿ ಆರ್‌ಪಿಎಫ್ ಸಿಬ್ಬಂದಿಯನ್ನು ಅರ್ಪಣಾ ಎಂದು ಗುರುತಿಸಲಾಗಿದೆ. ಅವರ ಸಮಯಪ್ರಜ್ಞೆಯಿಂದ ಮಹಿಳಾ ಪ್ರಯಾಣಿಕರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ವೈರಲ್ ಆಗುತ್ತಿದೆ. ಆಕೆಯ ಈ ಸಾಹಸಕ್ಕೆ ಸಾರ್ವಜನಿಕರಿಂದ ಮತ್ತು ರೈಲ್ವೆ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.