ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದರೆ ಆ.15ರ ಬಳಿಕ ಪ್ರತಿಭಟನೆ: ಎಚ್.ಎನ್.ಮಂಜುನಾಥ್ ಎಚ್ಚರಿಕೆ

| Published : Aug 07 2024, 01:05 AM IST

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದರೆ ಆ.15ರ ಬಳಿಕ ಪ್ರತಿಭಟನೆ: ಎಚ್.ಎನ್.ಮಂಜುನಾಥ್ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ಪಟ್ಟಣದ ಪುರಸಭೆ ಮತ್ತು ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮಧ್ಯವರ್ತಿಗಳಿಲ್ಲದೆ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಣ ಕೊಡದಿದ್ದರೆ ನೆಪ ಹೇಳುವ ಅಧಿಕಾರಿಗಳು ಕಡತಗಳನ್ನು ಮುಂದಿನ ಟೇಬಲ್‌ಗೆ ಸಾಗಿಸುವುದಿಲ್ಲ. ಪ್ರತಿ ಕೆಲಸಕ್ಕೂ ರೈತರು ಇಂತಿಷ್ಟು ಹಣ ಕೊಡಲೇಬೇಕೆಂಬ ಅಲಿಖಿತ ನಿಯಮ ಸರ್ಕಾರಿ ಕಚೇರಿಗಳಲ್ಲಿ ಜಾರಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಪುರಸಭೆ ಮತ್ತು ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮಧ್ಯವರ್ತಿಗಳಿಲ್ಲದೆ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕದಿದರೆ ಆ.15ರ ಬಳಿಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.

ಹಣ ಕೊಡದಿದ್ದರೆ ನೆಪ ಹೇಳುವ ಅಧಿಕಾರಿಗಳು ಕಡತಗಳನ್ನು ಮುಂದಿನ ಟೇಬಲ್‌ಗೆ ಸಾಗಿಸುವುದಿಲ್ಲ. ಪ್ರತಿ ಕೆಲಸಕ್ಕೂ ರೈತರು ಇಂತಿಷ್ಟು ಹಣ ಕೊಡಲೇಬೇಕೆಂಬ ಅಲಿಖಿತ ನಿಯಮ ಸರ್ಕಾರಿ ಕಚೇರಿಗಳಲ್ಲಿ ಜಾರಿಯಲ್ಲಿದೆ. ರಾಜಕಾರಣಿಗಳು ಶಿಫಾರಸ್ಸು ಮಾಡಿದರೂ ಕೆಲಸ ಆಗುತ್ತಿಲ್ಲ ಎಂದು ಕಿಡಿಕಾರಿದರು.

ರೈತರು, ಜನರು ತಮ್ಮ ಕೆಲಸಗಳಿಗಾಗಿ ಮಧ್ಯವರ್ತಿಗಳ ಬಳಿ ಹೋದರೆ ಯಾವುದೇ ಕೆಲಸವಾದರೂ ನೀರು ಕುಡಿದಷ್ಟು ಸುಲಲಿತವಾಗಿ ಆಗುತ್ತದೆ. ಅಧಿಕಾರಿಗಳ ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ಪ್ರತಿಭಟನೆಯೊಂದೇ ಹಾದಿ ತುಳಿಯಬೇಕಿದೆ ಎಂದು ಎಚ್ಚರಿಸಿದರು.

ಬಹುತೇಕ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿವೆ. ರೈತರು, ಸಾರ್ವಜನಿಕರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಸಬ್ ರಿಜಿಸ್ಟರ್ ಕಚೇರಿ ಮೊದಲ ಮಹಡಿಯಲ್ಲಿದ್ದು, ವೃದ್ಧರು, ಅಂಗವಿಕಲರು ಮಹಡಿ ಹತ್ತಲು ಸಾಧ್ಯವಾಗುತ್ತಿಲ್ಲ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ , ಶೌಚಗೃಹಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ ಎಂದರು.

ಕಚೇರಿಗಳು ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ ನಾಗರೀಕರು ತಮ್ಮ ವಾಹನಗಳನ್ನು ಹೆದ್ದಾರಿಯಲ್ಲೇ ಪಾರ್ಕ್ ಮಾಡುವುದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.

ವಾಹನಗಳ ದಾಖಲೆಗಳ ತಪಾಸಣೆ ನೆಪದಲ್ಲಿ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿ ರೈತರು ಮತ್ತು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಜನನಿಬಿಡ ರಸ್ತೆಗಳಲ್ಲಿ ತಪಾಸಣೆ ನಡೆಸುತ್ತಿರುವುದ್ದರಿಂದ ನಾಗರೀಕರಿಗೆ ಸಮಸ್ಯೆ ಆಗುತ್ತಿದೆ. ದಾಖಲೆಗಳು ಸರಿಯಾಗಿದ್ದರೂ ಸಬೂಬು ಹೇಳಿ ಹಣ ವಸೂಲಿ ಮಾಡುತ್ತಿದ್ದಾರೆ. ರಾತ್ರಿ ಹತ್ತರ ನಂತರವೂ ತೆರೆದಿರುವ ಕೆಲವೇ ಕೆಲವು ಅಂಗಡಿ ಮತ್ತು ಹೊಟೇಲ್‌ಗಳನ್ನು ಟಾರ್ಗೆಟ್ ಮಾಡಿ ಹೆದರಿಸಲಾಗುತ್ತಿದೆ ಎಂದು ಆರೋಪಿಸಿದರು.

ಪಟ್ಟಣದಲ್ಲಿ ಭೂಮಿ ಬೆಲೆ ಹೆಚ್ಚಳದಿಂದ ಅಕ್ರಮ ಖಾತೆಗಳ ಸಂಖ್ಯೆ ಹೆಚ್ಚಿದ್ದು, ಇದರ ಹಿಂದೆ ದಲ್ಲಾಳಿಗಳ ಕೈವಾಡವಿದೆ. ಪುರಸಭೆ ವ್ಯಾಪ್ತಿ ರಸ್ತೆಗಳು ಹದಗೆಟ್ಟಿದರೂ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಹಿರೋಡೆ ಕೆರೆ ಒತ್ತುವರಿ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ಈ ಜಮೀನಿನಲ್ಲಿ ರೈತರು ಹಿಂದೆ ಬೆಳೆದಿದ್ದ ತೆಂಗಿನ ಮರಗಳಲ್ಲಿ ಸಿಗುವ ಎಳನೀರು ಮತ್ತು ತೆಂಗಿನಕಾಯಿ ಮಾರಾಟ ಮಾಡಿದ ಹಣವನ್ನು ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಡಬ ಪುಟ್ಟರಾಜು, ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಎನ್.ಭಾಸ್ಕರ್, ಗಾಣದಹೊಸೂರು ಕೃಷ್ಣಪ್ಪ, ದೊರೆಸ್ವಾಮಿ, ಅನಿಲ್ ಇತರರು ಇದ್ದರು.