ಹಾಸ್ಟೆಲ್ ವಿದ್ಯಾರ್ಥಿ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಒತ್ತಾಯ

| Published : Feb 23 2024, 01:50 AM IST / Updated: Feb 23 2024, 01:51 AM IST

ಸಾರಾಂಶ

ಸಿಂಧನೂರಿನ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕ ಮಿನಿವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರುಣ್ ಎಚ್.ದೇಸಾಯಿಗೆ ಮನವಿ ಪತ್ರ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಗುಂಜಳ್ಳಿ ಗ್ರಾಮದ ವಿದ್ಯಾರ್ಥಿಯು ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ಅವರ ಕುಟುಂಬಕ್ಕೆ ಪರಿಹಾರ, ಉದ್ಯೋಗ ಹಾಗೂ ಸರ್ಕಾರಿ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕ ಸ್ಥಳೀಯ ಮಿನಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿತು.

ನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮೇಲ್ಭಾಗದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿ ಹಿರೇಹುಸೇನಪ್ಪ ಮೂಲಸೌಕರ್ಯಗಳ ಕುರಿತು ಹಾಸ್ಟೆಲ್ ವಾರ್ಡನ್ ರವಿಚಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ಅವರನ್ನು ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ ಮಾಡಿದಷ್ಟೇ ಅಲ್ಲದೆ, ಇತರೆ ವಿದ್ಯಾರ್ಥಿಗಳಿಂದ ದೌರ್ಜನ್ಯ ಮಾಡಿಸಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ವಿಚಾರಿಸಲು ಬಂದ ಪೋಷಕರಿಗೂ ಅಧಿಕಾರಿಗಳು ಸಿಕ್ಕಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿ ಹಿರೇಹುಸೇನಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳೆ ನೇರ ಹೊಣೆಯಾಗಿದ್ದಾರೆ ಎಂದು ದೂರಿದರು.

ಹಿರೇಹುಸೇನಪ್ಪ ಅವರ ಕುಟುಂಬವು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸರ್ಕಾರ ರು.25 ಲಕ್ಷ ಪರಿಹಾರ, ಉದ್ಯೋಗ ಹಾಗೂ ಸರ್ಕಾರಿ ಭೂಮಿ ಮಂಜೂರು ಮಾಡಬೇಕು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಸಿರುವ ಮನವಿ ಪತ್ರವು ಸತ್ಯಕ್ಕೆ ದೂರವಿದ್ದು, ಅದನ್ನು ತಿರಸ್ಕಾರ ಮಾಡಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳೆಲ್ಲ ಒಗ್ಗೂಡಿ ತಾಲೂಕಿನಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಇದ್ದರು.