ಕೇಂದ್ರ ಸರ್ಕಾರ ನ. ೨೧ರಂದು ಪಾಸ್ ಮಾಡಿರುವ ಕಾರ್ಮಿಕ ಯೋಜನೆಗಳು ಕಾರ್ಮಿಕ ವಿರೋಧಿ ಆಗಿವೆ ಎಂದು ಇಲ್ಲಿನ ಗ್ರಾಸಿಂ ಕೈಗಾರಿಕೆಯ ಕಾರ್ಮಿಕರು, ಎಐಟಿಯುಸಿ ನೇತೃತ್ವದಲ್ಲಿ ಸೋಮವಾರ ತಾಲೂಕಿನ ಕುಮಾರಪಟ್ಟಣ ಕಾರ್ಖಾನೆಯ ಮುಖ್ಯದ್ವಾರದ ಎದುರು ಪ್ರತಿಭಟಿಸಿ, ಹೊಸದಾಗಿ ಜಾರಿಗೆ ತಂದಿರುವ ನೀತಿ ಸಂಹಿತೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಣಿಬೆನ್ನೂರು: ಕೇಂದ್ರ ಸರ್ಕಾರ ನ. ೨೧ರಂದು ಪಾಸ್ ಮಾಡಿರುವ ಕಾರ್ಮಿಕ ಯೋಜನೆಗಳು ಕಾರ್ಮಿಕ ವಿರೋಧಿ ಆಗಿವೆ ಎಂದು ಇಲ್ಲಿನ ಗ್ರಾಸಿಂ ಕೈಗಾರಿಕೆಯ ಕಾರ್ಮಿಕರು, ಎಐಟಿಯುಸಿ ನೇತೃತ್ವದಲ್ಲಿ ಸೋಮವಾರ ತಾಲೂಕಿನ ಕುಮಾರಪಟ್ಟಣ ಕಾರ್ಖಾನೆಯ ಮುಖ್ಯದ್ವಾರದ ಎದುರು ಪ್ರತಿಭಟಿಸಿ, ಹೊಸದಾಗಿ ಜಾರಿಗೆ ತಂದಿರುವ ನೀತಿ ಸಂಹಿತೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಟಿಯುಸಿ ಕಾರ್ಮಿಕ ಸಂಘಟನೆಯ ಮಾಜಿ ಮುಖಂಡ ಬಸವರಾಜ ಹಿತ್ತಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಕಾರ್ಮಿಕ ವಿರೋಧಿ ಯೋಜನೆಗಳಾಗಿವೆ. ಇದು ಏಕಪಕ್ಷೀಯ ತೀರ್ಮಾನವಾಗಿದೆ. ದೇಶದ ಶ್ರಮ ಸಂಹಿತೆ ೨೦೨೫ ಕರಡು ನೀತಿಗಳು ಜನ ವಿರೋಧಿ ನಡೆಯಾಗಿದ್ದು, ಬಿಎಂಎಸ್ ಕಾರ್ಮಿಕ ಸಂಘಟನೆ ಹೊರತುಪಡಿಸಿ, ದೇಶದ ೧೦ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ನೀತಿಗಳನ್ನು ವಿರೋಧಿಸಿವೆ ಎಂದು ಆಗ್ರಹಿಸಿದರು.ಕೇಂದ್ರ ಸರ್ಕಾರ ದೇಶದ ದುಡಿಯುವ ಜನರ ವಿರುದ್ಧ ನೀತಿ ಸಂಹಿತೆಗಳನ್ನು ಜಾರಿಮಾಡಿದೆ. ಈ ಹಿಂದೆ ಕಾರ್ಮಿಕರಿಗೆ ಇದ್ದಂತಹ ಎಂಟು ಗಂಟೆಯ ಕೆಲಸ ಈಗ ೧೨ ಗಂಟೆಗೆ ಹೆಚ್ಚಿಸಲಾಗಿದೆ. ಕಾರ್ಮಿಕ ಸಂಹಿತೆಗಳು ಸಂಪೂರ್ಣ ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿದೆಯಲ್ಲದೆ, ಈ ಸಂಹಿತೆಗಳು ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಆಗಿದ್ದು ಮಾಲೀಕರ ಪರವಾಗಿವೆ. ಕೇಂದ್ರ ಸರ್ಕಾರವು ತಕ್ಷಣವೆ ಹೊಸದಾಗಿ ಜಾರಿಗೆ ತಂದಿರುವ ನೀತಿ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರ ಎಂದು ಹಿತ್ತಲಮನಿ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಐಟಿಯುಸಿ ಕೃಷ್ಣಮೂರ್ತಿ ಜಿ., ಜಿಲ್ಲಾ ಸಂಚಾಲಕ ಮುದಿಮಲ್ಲನಗೌಡ್ರ, ಮಂಜುನಾಥ ಬಿ.ಆರ್., ಪ್ರದೀಪ್‌ ಅಡ್ಮನಿ, ಪರಶುರಾಮ ಜಾಧವ್, ನಾಗರಾಜ ಜಿ.ಎಸ್. ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು, ಕಾರ್ಮಿಕ ಮುಖಂಡರಾದ ಪ್ರವೀಣ ತುವಾರ, ಮಂಜುನಾಥ ಮಲ್ಲಾಪುರ, ರಂಜಿತ್ ಕೆ., ಕರಬಸಪ್ಪ ಹಂಚಿನ್, ಬಸವರಾಜ ಕರಬಸಳ್ಳೆರ ಸೇರಿದಂತೆ ನೂರಾರು ಜನ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.