ಸಾರಾಂಶ
ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವಿರುದ್ಧದ ಕೇಸ್ ಕೇರಳ ಹೈಕೋರ್ಟ್‌ನಲ್ಲಿ ಇದೆ. ಕನ್ನಡಿಗರಿಂದ ಭಿಕ್ಷೆ ಎತ್ತಿ ಕನ್ನಡಿಗರು ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಈ ನಡುವೆಯೇ ಪಂಚಾಯ್ತಿ ವಿರುದ್ಧ ಈಗ ಪ್ರತಿಭಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಕಾಸರಗೋಡಿನ ಕೋರಿಕಂಡ ಕನ್ನಡ ಮಾಧ್ಯಮ ಅಂಗನವಾಡಿಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ಹಿನ್ನೆಲೆಯಲ್ಲಿ ಸ್ಥಳೀಯ ದೇಲಂಪಾಡಿ ಗ್ರಾಮ ಪಂಚಾಯ್ತಿ ವಿರುದ್ಧ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.ಅಂಗನವಾಡಿ ಮಕ್ಕಳ ಹೆತ್ತವರು, ಪೋಷಕರು ಹಾಗೂ ಕನ್ನಡ ಸಂಘಟನೆಗಳು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಭೆ ನಡೆಸಿದರು. ಅಂಗನವಾಡಿ ಶಿಕ್ಷಕಿಯರ ನೇಮಕ ವಿಚಾರದಲ್ಲಿ ಪಂಚಾಯಿತಿ ಆಡಳಿತ ಕನ್ನಡ ಭಾಷಿಕರ ನಿರ್ಲಕ್ಷ್ಯ ವಹಿಸಿದೆ. ಪಂಚಾಯ್ತಿ ಸಮಿತಿಯ ಪಟ್ಟಿಯಲ್ಲಿ ಕನ್ನಡೇತರರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ನ್ಯಾಯವಾದಿ ಶ್ರೀಕಾಂತ್ ಅವರು ಪ್ರತಿಭಟನೆಗೆ ಚಾಲನೆ ನೀಡಿದರು. ಅಶೋಕ್ ಸರಳಾಯ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮುರಳೀಧರ ಬಳ್ಳಕುರಾಯ, ಪಂಚಾಯ್ತಿ ಸದಸ್ಯೆ ಪ್ರಮೀಳಾ ನಾಯ್ಕ, ಜಯ ನಾರಾಯಣ, ಸುಂದರ ಬಾರಡ್ಕ ಮತ್ತಿತರರು ಮಾತನಾಡಿದರು.ಹೋರಾಟ ಸಮಿತಿಯ ನಯನ ಗಿರೀಶ್, ಗಂಗಾಧರ ಅಡೂರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವಿರುದ್ಧದ ಕೇಸ್ ಕೇರಳ ಹೈಕೋರ್ಟ್‌ನಲ್ಲಿ ಇದೆ. ಕನ್ನಡಿಗರಿಂದ ಭಿಕ್ಷೆ ಎತ್ತಿ ಕನ್ನಡಿಗರು ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಈ ನಡುವೆಯೇ ಪಂಚಾಯ್ತಿ ವಿರುದ್ಧ ಈಗ ಪ್ರತಿಭಟನೆ ನಡೆದಿದೆ.