ಕೆಆರ್ ಎಸ್ ಅಣೆಕಟ್ಟೆ ಬಳಿ ಕಾವೇರಿ ಆರತಿ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

| Published : Sep 27 2025, 01:00 AM IST

ಕೆಆರ್ ಎಸ್ ಅಣೆಕಟ್ಟೆ ಬಳಿ ಕಾವೇರಿ ಆರತಿ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಣೆಕಟ್ಟೆ ಬಳಿ ಶಬ್ಧಮಾಲಿನ್ಯ, ಜನ ಸೇರುವುದು ಯಾವುದನ್ನೂ ಮಾಡುವುದಿಲ್ಲ ಎನ್ನುವುದನ್ನು ನೀರಾವರಿ ಇಲಾಖೆಯೇ ತಿಳಿಸಿದೆ. ಅಣೆಕಟ್ಟೆಗೆ ತೊಂದರೆಯಾದರೂ ಅವರು ಹೊಣೆ ಆಗುತ್ತಾರೆ. ಹೈಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ಕಾವೇರಿ ಆರತಿ ಮಾಡುತ್ತಿದ್ದಾರೆ.

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಕಾವೇರಿ ಆರತಿಗೆ ಆಕ್ರೋಶ । ಪ್ರತಿಭಟನಾಕಾರರಿಗೆ ಚಳ್ಳೆ ಹಣ್ಣು ತಿನಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಕೆಆರ್‌ಎಸ್‌ ಅಣೆಕಟ್ಟೆಯ ಬೃಂದಾವನ ಬಳಿ ರಾಜ್ಯ ಸರ್ಕಾರ ನಡೆಸುತ್ತಿರುವ ಕಾವೇರಿ ಆರತಿ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೆಆರ್ ಎಸ್ ನ ದಕ್ಷಿಣ ದ್ವಾರದ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರ್ಕಾರ, ಡಿಸಿಎಂ, ಸಚಿವರು, ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್‌ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ, ಕಾವೇರಿ ಆರತಿ ಯೋಜನೆ ಮಾಡುವುದಕ್ಕೆ ಹಿಂದಿನಿಂದಲೂ ವಿರೋಧ ಮಾಡುತ್ತಿದ್ದೇವೆ. ಕಾವೇರಿ ಆರತಿ ಮೂಲಕ ಸರ್ಕಾರ ಮೂಢನಂಬಿಕೆ ಬಿತ್ತಲು ಹೊರಟಿದೆ ಎಂದು ಕಿಡಿಕಾರಿದರು.

ಕೆಆರ್‌ಎಸ್‌ ಅಣೆಕಟ್ಟು ಇತಿಹಾಸ ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆಯಾಗಿದೆ. ಅಣೆಕಟ್ಟೆ ಭದ್ರತೆಗೆ ಕಾನೂನು ರೂಪಿಸಿರುವ ಸರ್ಕಾರವೇ ಅದೇ ಕಾನೂನು ಉಲ್ಲಂಘಿಸಿರುವುದು ದುರಂತವಾಗಿದೆ ಎಂದು ದೂರಿದರು.

ಈ ಎರಡು ವಿಚಾರವನ್ನು ನ್ಯಾಯಾಲಯದ ಮೂಲಕವೇ ಉತ್ತರಿಸಲು ಇಟ್ಟಿದ್ದೇವೆ. ಇವರ ಅಧಿಕಾರದ ದರ್ಪದಿಂದ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿವೃದ್ಧಿ ಮಾಡದೇ ಕೆಆರ್‌ಎಸ್‌ ಬಳಿ ಈ ಯೋಜನೆ ಮಾಡಲು ಹೊರಟಿದ್ದಾರೆ. ಇದು ನಾಚಿಕೆಗೇಡು. ಪ್ರಾಯೋಗಿಕವಾಗಿ ಏನನ್ನೂ ಮಾಡುವುದು ಬೇಡ ಎಂದು ಆಗ್ರಹಿಸಿದರು.

ಕೆಆರ್‌ಎಸ್‌ ಅಣೆಕಟ್ಟೆ ಬಳಿಯೇ ಇವೆಲ್ಲವನ್ನೂ ಮಾಡಲು ಒಪ್ಪಿಗೆ ಕೊಟ್ಟಿದ್ದು ಯಾರು? ಇವರು ಖಾಸಗಿಯಾಗಿ ಹಣ ಸಂಪಾದನೆ ಮಾಡುವ ದಾರಿಯಾಗಿದೆ. ಯಾರ ಮೇಲೆ ದರ್ಪ ಮಾಡಲು ಹೊರಟಿದ್ದಾರೆ. ಇಲ್ಲಿ ಬಂದಿರುವ ರೈತರು ಸ್ವಇಚ್ಚೆಯಿಂದ ಬಂದಿದ್ದಾರೆ, ಯಾರಿಗೂ ಹಣ ಕೊಟ್ಟು ಕರೆದುಕೊಂಡು ಬಂದಿಲ್ಲ ಎಂದರು.

ಅಣೆಕಟ್ಟೆ ಬಳಿ ಶಬ್ಧಮಾಲಿನ್ಯ, ಜನ ಸೇರುವುದು ಯಾವುದನ್ನೂ ಮಾಡುವುದಿಲ್ಲ ಎನ್ನುವುದನ್ನು ನೀರಾವರಿ ಇಲಾಖೆಯೇ ತಿಳಿಸಿದೆ. ಅಣೆಕಟ್ಟೆಗೆ ತೊಂದರೆಯಾದರೂ ಅವರು ಹೊಣೆ ಆಗುತ್ತಾರೆ. ಹೈಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ ಕಾವೇರಿ ಆರತಿ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಎ.ಎಲ್.ಕೆಂಪೂಗೌಡ, ಇಂಡುವಾಳು ಚಂದ್ರಶೇಖರ್‌, ಸಿ.ಕುಮಾರಿ, ಶಿವಳ್ಳಿ ಚಂದ್ರು, ಮುದ್ದೇಗೌಡ, ನಾಗಣ್ಣ, ಪ್ರಭುಲಿಂಗ, ಬೊಮ್ಮೇಗೌಡ, ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.