ಕೊಪ್ಪಳದ ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ನಮ್ಮ ಹಿರಿಯರೆಲ್ಲರೂ ಸೇರಿ ನಾವು ಹೋರಾಟ ಮಾಡಿದ್ದೇವೆ. ಕರ್ನಾಟಕ ರಾಜ್ಯ ಸರ್ಕಾರ ಬಡಜನರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವ ಕೆಪಿಎಸ್ ಮಾಗ್ನೆಟ್ ಯೋಜನೆ ತಂದು ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲು ಮುಂದಾಗಿದೆ
ಕೊಪ್ಪಳ: ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ವಿಲೀನದ ಹೆಸರಲ್ಲಿ ಕೊಪ್ಪಳ ಜಿಲ್ಲೆಯ 100ಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಓ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಗರದ ಕನಕದಾಸ ವೃತ್ತದಿಂದ ಅಶೋಕ ವೃತ್ತದವರೆಗೆ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷರು ಹಾಗೂ ಹೋರಾಟಗಾರದ ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳದ ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ನಮ್ಮ ಹಿರಿಯರೆಲ್ಲರೂ ಸೇರಿ ನಾವು ಹೋರಾಟ ಮಾಡಿದ್ದೇವೆ. ಕರ್ನಾಟಕ ರಾಜ್ಯ ಸರ್ಕಾರ ಬಡಜನರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವ ಕೆಪಿಎಸ್ ಮಾಗ್ನೆಟ್ ಯೋಜನೆ ತಂದು ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿ ಮುಚ್ಚಲು ಮುಂದಾಗಿದೆ. ಇದು ಕೊಪ್ಪಳ ಜಿಲ್ಲೆಯ ಜನರನ್ನು ಶೈಕ್ಷಣಿಕವಾಗಿ ಹಿಂದುಳಿಸುವ ಹುನ್ನಾರವಾಗಿದೆ. ಈ ಕೂಡಲೇ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಕೊಪ್ಪಳದಲ್ಲಿ ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಆದೇಶ ನೀಡಬೇಕು, ಇಲ್ಲದಿದ್ದರೆ ಬೃಹತ್ ಜನ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.ಎಐಡಿಎಸ್ಓ ರಾಜ್ಯ ಸಮಿತಿಯ ಸದಸ್ಯ ಸಿಂಧೂ ಕೌದಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಆರಂಭಸಿರುವ ಕೆಪಿಎಸ್ ಶಾಲೆಗಳನ್ನು ಮಾಗ್ನೆಟ್ ಮೂಲಕ 3 ರಿಂದ 5 ಕಿಮೀ ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು ಅಕ್ಟೋಬರ್ 15, 2025ರ ಆದೇಶದಲ್ಲಿ ನೀಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಹಂತದ ಪಟ್ಟಿಯಲ್ಲಿ ಕೊಪ್ಪಳದ ಹಿಟ್ನಾಳ್ ಕೆಪಿಎಸ್ ಮಾಗ್ನೆಟ್ ಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಾದ ಹೀರೆಕಾಸನಖಂಡಿ, ಹಿರೇಬಗನಾಳ, ಹೊಸಳ್ಳಿ, ಅಗಳಕೇರಿ, ಕನಕಪುರ, ದೇವನಹಳ್ಳಿ ಕೆರೆಹಳ್ಳಿ ಮತ್ತು ಸುತ್ತಲಿನ ಶಾಲೆ, ಹೊಸ ಬಂಡಿ ಹರ್ಲಾಪುರ ಕೆಪಿಎಸ್ ಮ್ಯಾಗ್ನೆಟ್ ಗೆ ಮಹ್ಮದ್ ನಗರ, ರಾಜಾರಾಮ್ ಪೇಟೆ, ನಾರಾಯಣ ಪೇಟೆ, ಶಿವಪುರ, ಹ್ಯಾಟಿ ಕೆಪಿಎಸ್ ಮ್ಯಾಗ್ನೆಟ್ ಗೆ ಮಳ್ಳಿಕೇರಿ ಮತ್ತು ಸುತ್ತಲಿನ ಶಾಲೆಗಳು ವೀಲಿನಗೊಳ್ಳಲಿವೆ. ಗಂಗಾವತಿಯ ವೆಂಕಟಗಿರಿ ಕೆಪಿಎಸ್ ಮಾಗ್ನೆಟ್ ಗೆ ಗಡ್ಡಿ, ಬಂಡ್ರಾಳ್, ಉಡಮಕಲ್, ಆನೆಗುಂದಿ ಕೆಪಿಎಸ್ ಮಾಗ್ನೆಟ್ ಗೆ ಹಿರೇಕೇಡ ಕೆಪಿಎಸ್ ಮಾಗ್ನೆಟ್, ಚಿಕ್ಕ ಡಂಕನಕಲ್ ಮಾಗ್ನೆಟ್, ಗೌರಿಪುರ ಮಾಗ್ನೆಟ್ ಗೆ ಸುತ್ತಲಿನ ಶಾಲೆ, ಕುಷ್ಟಗಿ ನಿಲೋಗಲ್ ಮಾಗ್ನೆಟ್ ಗೆ ಶಾದಲಗೇರಿ ಬೆಳಕಲ್, ತಗ್ಗುಳದಿನ್ನಿ ಮತ್ತು ಕೆಪಿಎಸ್ ಮಾಗ್ನೆಟ್ ತಳವಗೇರಾ ಸುತ್ತಲಿನ ಶಾಲೆಗಳಿವೆ. ಯಲಬುರ್ಗಾದ ಕೆಪಿಎಸ್ ಮಾಗ್ನೆಟ್ ಹಿರೇಮ್ಯಾಗೇರಿ, ಗಾಣದಾಳ, ಬನ್ನಿಕೊಪ್ಪದ ಮಾಗ್ನೆಟ್ ಗಳಿಗೆ ಸುತ್ತಲಿನ ಶಾಲೆಗಳು ಮುಂತಾದ ನೂರಕ್ಕೂ ಹೆಚ್ಚು ಶಾಲೆಗಳು ವೀಲಿನದ ಹೆಸರಲ್ಲಿ ಮುಚ್ಚಿಹೋಗುತ್ತವೆ, ಈ ಕೂಡಲೇ ಈ ನಿರ್ಧಾರವನ್ನು ಜಿಲ್ಲೆಯ ಉಪ ನಿರ್ದೇಶಕರು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಜಿಲ್ಲೆಯು ಮೊದಲೇ ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಕೂಡಿದೆ, ಹೀಗಿರುವಾಗ ಗ್ರಾಮೀಣ ಪ್ರದೇಶದ ಹಳ್ಳಿಗಳ ಶಾಲೆಗಳನ್ನು ಒಂದೇ ಸೂರಿನಡಿ ಕೆಪಿಎಸ್ ಮಾಡಿ ಉಳಿದ ಹಳ್ಳಿಗಳ ಶಾಲೆಗಳನ್ನು ಅದಕ್ಕೆ ವಿಲೀನಗೊಳಿಸಿದರೆ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ನಿಮ್ಮ ಈ ಹೋರಾಟದ ಜತೆಗೆ ನಾನು ಸದಾ ಇರುತ್ತೇನೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಸದಸ್ಯರಾದ ಪ್ರದೀಪ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯ ಶರಣು ಪಾಟೀಲ್, ಶಾರದ ಗಡ್ಡಿ ಸೇರಿದಂತೆ ಅನೇಕರು ಇದ್ದರು.