12ನೇ ಶತಮಾನದಲ್ಲಿಯೇ ಸಮಾನತೆ, ಕಾಯಕನಿಷ್ಠೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಜಗಜ್ಯೋತಿ ಬಸವಣ್ಣನವರ ಕುರಿತು ರವಿ ಹಂಜ್ ಎಂಬುವವರ ಪುಸ್ತಕದಲ್ಲಿ ಪ್ರಕಟವಾಗಿರುವ ಅವಹೇಳನಕಾರಿ ಅಂಶಗಳನ್ನು ಖಂಡಿಸಿ, ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಲಿಂಗಾಯತ ಒಕ್ಕೂಟ, ವೀರಶೈವ ಮಹಾಸಭಾ ಹಾಗೂ ಬಸವಣ್ಣನವರ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಶಿಗ್ಗಾಂವಿ:12ನೇ ಶತಮಾನದಲ್ಲಿಯೇ ಸಮಾನತೆ, ಕಾಯಕನಿಷ್ಠೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಜಗಜ್ಯೋತಿ ಬಸವಣ್ಣನವರ ಕುರಿತು ರವಿ ಹಂಜ್ ಎಂಬುವವರ ಪುಸ್ತಕದಲ್ಲಿ ಪ್ರಕಟವಾಗಿರುವ ಅವಹೇಳನಕಾರಿ ಅಂಶಗಳನ್ನು ಖಂಡಿಸಿ, ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಲಿಂಗಾಯತ ಒಕ್ಕೂಟ, ವೀರಶೈವ ಮಹಾಸಭಾ ಹಾಗೂ ಬಸವಣ್ಣನವರ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್, ಸಮಾಜಘಾತುಕ ವ್ಯಕ್ತಿಯಾಗಿರುವ ರವಿ ಹಂಜ್ ಅವರ ಇಂತಹ ನಡೆ ಖಂಡನೀಯ. ಸಮಾನತೆಯ ಸಂದೇಶವನ್ನು ಸಾರಿದ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ. 12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಸಮಾನತೆಯ ಸಂದೇಶ 21ನೇ ಶತಮಾನದಲ್ಲಿ ಸಂಪೂರ್ಣವಾಗಿ ಜಾರಿಗೆ ಬರುತ್ತಿರುವುದು ಸಂತೋಷದ ಸಂಗತಿ. ಇಂತಹ ಸಂದರ್ಭದಲ್ಲಿ ಕೆಲ ವ್ಯಕ್ತಿಗಳಿಂದ ಸಮಾಜಘಾತುಕ ಕೆಲಸಗಳು ನಡೆಯಬಾರದು. ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಣ್ಣನವರ ಕುರಿತು ಹಗುರವಾಗಿ ಮಾತನಾಡುವುದು ಸಹಿಸಲು ಸಾಧ್ಯವಿಲ್ಲ ಎಂದರು.

ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ವ್ಯಕ್ತಿಗಳನ್ನು ಕೇವಲ ಎಚ್ಚರಿಸುವುದಷ್ಟೇ ಅಲ್ಲ, ಗಡಿಪಾರು ಮಾಡಬೇಕು. ಬಸವಣ್ಣನವರ ಆದರ್ಶಗಳು ಇಡೀ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಕಾಯಕನಿಷ್ಠೆ ಹಾಗೂ ಸಮಾನತೆಯ ತತ್ವಗಳನ್ನು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಾರಿದ ಬಸವೇಶ್ವರರ ವಿಚಾರಧಾರೆಗಳು ಇಂದಿಗೂ ಅನುಕರಣೀಯವಾಗಿವೆ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಮುಖಂಡರು, ಬಸವಣ್ಣನವರ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ, ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇಂತಹ ಮಹಾನ್ ಶರಣರ ಕುರಿತು ಅವಹೇಳನಕಾರಿ ವಿಚಾರಗಳನ್ನು ಪ್ರಕಟಿಸುವುದನ್ನು ಖಂಡಿಸುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ರಾಗಿ, ಮುಖಂಡರಾದ ಶಿವಾನಂದ ಬಾಗೂರ, ಬಸಲಿಂಗಪ್ಪ ನರಗುಂದ, ಉಮೇಶ ಗೌಳಿ, ಬಸವರಾಜ ಜೇಕನಕಟ್ಟಿ, ಫಕೀರಪ್ಪ ಕುಂದೂರ, ವಸಂತ ಬಾಗೂರ, ಮಂಜುನಾಥ ಮಣ್ಣಣ್ಣವರ, ರಮೇಶ ದುಗತ್ತಿ, ಆನಂದ ಲಮಾಣಿ, ರಮೇಶ ವನಹಳ್ಳಿ, ಅಣ್ಣಪ್ಪ ಲಮಾಣಿ, ಸಿದ್ದಣ್ಣ ಮೊರಬದ, ಅಶೋಕ ಕಾಳೆ, ಮಲತೇಶ ಯಲಿಗಾರ, ಗೌಸಖಾನ್ ಮುನಶಿ, ಜಿ.ಜಿ. ಪಾಟೀಲ, ಶಂಬು ನೆರ್ತಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಬಸವಣ್ಣನವರ ಅಭಿಮಾನಿಗಳು ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.