ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಳಂಬ ಖಂಡಿಸಿ ಪ್ರತಿಭಟನೆ

| Published : Sep 27 2025, 12:00 AM IST

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಳಂಬ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ೪೩೨ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು ೬,೦೦೦ ಕಾಯಂ ಉಪನ್ಯಾಸಕರಲ್ಲಿ ೩,೦೦೦ಕ್ಕಿಂತ ಹೆಚ್ಚು ಮಂದಿ ಈಗಾಗಲೇ ನಿವೃತ್ತರಾಗಿದ್ದಾರೆ. ಇನ್ನುಳಿದ ೩,೦೦೦ ಕಾಯಂ ಉಪನ್ಯಾಸಕರ ಜೊತೆ ಸುಮಾರು ೧೨,೦೦೦ ಅತಿಥಿ ಉಪನ್ಯಾಸಕರ ನೆರವಿನಿಂದ ತರಗತಿಗಳು ಸಾಗುತ್ತಿವೆ. ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು, ಅದನ್ನು ಖಾತ್ರಿಪಡಿಸುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತು, ನ್ಯಾಯಾಲಯದ ಆದೇಶವನ್ನೂ ಕಡೆಗಣಿಸಿ, ನೇಮಕಾತಿಯಲ್ಲಿ ಗಂಭೀರ ವಿಳಂಬ ತರುತ್ತಿರುವುದು ನಿಜಕ್ಕೂ ಕಳವಳಕರ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

೨೦೨೫-೨೬ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಅನ್ವಯ ತಕ್ಷಣ ಕ್ರಮ ಕೈಗೊಳ್ಳದೆ, ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಎಬಿವಿಪಿ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ೪೩೨ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು ೬,೦೦೦ ಕಾಯಂ ಉಪನ್ಯಾಸಕರಲ್ಲಿ ೩,೦೦೦ಕ್ಕಿಂತ ಹೆಚ್ಚು ಮಂದಿ ಈಗಾಗಲೇ ನಿವೃತ್ತರಾಗಿದ್ದಾರೆ. ಇನ್ನುಳಿದ ೩,೦೦೦ ಕಾಯಂ ಉಪನ್ಯಾಸಕರ ಜೊತೆ ಸುಮಾರು ೧೨,೦೦೦ ಅತಿಥಿ ಉಪನ್ಯಾಸಕರ ನೆರವಿನಿಂದ ತರಗತಿಗಳು ಸಾಗುತ್ತಿವೆ. ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು, ಅದನ್ನು ಖಾತ್ರಿಪಡಿಸುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತು, ನ್ಯಾಯಾಲಯದ ಆದೇಶವನ್ನೂ ಕಡೆಗಣಿಸಿ, ನೇಮಕಾತಿಯಲ್ಲಿ ಗಂಭೀರ ವಿಳಂಬ ತರುತ್ತಿರುವುದು ನಿಜಕ್ಕೂ ಕಳವಳಕರ ಎಂದರು.

೨೦೨೫-೨೬ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಗೆ ರಾಜ್ಯ ಸರ್ಕಾರವು ಅರ್ಜಿ ಆಹ್ವಾನಿಸಿದ್ದಾಗ ೫೫,೦೦೦ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ವಿಶ್ವವಿದ್ಯಾಲಯಗಳಲ್ಲಿ ತರಗತಿಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಸಹ, ಅತಿಥಿ ಉಪನ್ಯಾಸಕರ ನೇಮಕಾತಿ ಆಗದಿರುವುದರಿಂದ ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಖಾಯಂ ಉಪನ್ಯಾಸಕರ ನೇಮಕಾತಿ ಮಾಡಲು ಯೋಗ್ಯತೆ ಇಲ್ಲದಿದ್ದರೂ, ಕನಿಷ್ಠ ಅರ್ಹ ಅತಿಥಿ ಉಪನ್ಯಾಸಕರನ್ನು ಆದೇಶಾನುಸಾರ ನೇಮಿಸಬೇಕು. ಆದರೆ ವಿಳಂಬದಿಂದ ಶಿಕ್ಷಣ ವ್ಯವಸ್ಥೆಯೇ ಕುಸಿಯುವ ಪರಿಸ್ಥಿತಿ ಉಂಟಾಗಿದೆ” ಎಂದು ಎಬಿವಿಪಿ ಪ್ರತಿನಿಧಿಗಳು ಒತ್ತಿ ಹೇಳಿದರು.

ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನವರೂ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು. ಇವರು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದು ಅವರ ಭವಿಷ್ಯಕ್ಕಾಗಿ ಅತ್ಯಗತ್ಯ. ಆದರೆ ಕಾಯಂ ಪ್ರಾಂಶುಪಾಲರಿಲ್ಲದೆ, ಉಪನ್ಯಾಸಕರಿಲ್ಲದೆ, ಅತಿಥಿ ಉಪನ್ಯಾಸಕರೂ ನೇಮಕವಾಗದಿರುವ ಸ್ಥಿತಿಯಲ್ಲಿ, ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ಇದು ರಾಜ್ಯದ ಶೈಕ್ಷಣಿಕ ಹಿತವನ್ನು ನಿರ್ಲಕ್ಷಿಸುವ ಗಂಭೀರ ತಪ್ಪಾಗಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಂಡು ಶಿಕ್ಷಣ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಪ್ರಮುಖ ಬೇಡಿಕೆಗಳು:

ಖಾಲಿ ಇರುವ ಎಲ್ಲಾ ಉಪನ್ಯಾಸಕರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಡೆಯುವ ವಿಳಂಬ ಧೋರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದ ಅಭ್ಯರ್ಥಿಗಳಿಗೇ ಪ್ರಾಮುಖ್ಯತೆ ನೀಡಿ ನೇಮಕಾತಿ ಮಾಡಬೇಕು. ವಿದ್ಯಾರ್ಥಿಗಳಿಗೆ ತರಗತಿಗಳು ನಿರಂತರವಾಗಿ ನಡೆಯುವಂತೆ ಖಚಿತಪಡಿಸಬೇಕು ಎಂದು ತಮ್ಮ ಪ್ರಮುಖ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟರು.ಪ್ರತಿಭಟನೆಯಲ್ಲಿ ಎಬಿವಿಪಿ ಹಾಸನ ಜಿಲ್ಲಾ ಸಂಚಾಲಕ ವೈ. ಚಿರಂತ್, ಹಲವು ವಿದ್ಯಾರ್ಥಿ ನಾಯಕರು, ಎಬಿವಿಪಿ ಕಾರ್ಯಕರ್ತರು ಹಾಗೂ ನೂರಾರು ಕಾಲೇಜು ವಿದ್ಯಾರ್ಥಿಗಳು ಜತೆಗೂಡಿದರು.

==========

ಫೋಟೋ:

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಡೆಯುವ ವಿಳಂಬ ಧೋರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.