ನಗರಸಭೆ ಚುನಾವಣೆ ವಿಳಂಬ ಖಂಡಿಸಿ ಪ್ರತಿಭಟನೆ

| Published : Feb 06 2025, 12:17 AM IST

ಸಾರಾಂಶ

ಎಸಿ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಅಲ್ಲಿಯೇ ಪ್ರತಿಭಟನೆಗೆ ಕುಳಿತರು. ಈ ವೇಳೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರು

ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವಿಳಂಬದ ಹಿನ್ನೆಲೆ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ಚುನಾವಣಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಎಸಿ ಕಚೇರಿಯಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಅಲ್ಲಿಯೇ ಪ್ರತಿಭಟನೆಗೆ ಕುಳಿತರು. ಈ ವೇಳೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದೇ ಪ್ರತಿಭಟನೆ ಮುಂದುವರೆಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ವಿಡಿಯೋ ಮಾಡಿ ಎಂದು ಹಿರಿಯ ಅಧಿಕಾರಿಗಳು ಸೂಚಿಸಿದರು.

ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯರು, ನಾವು ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ಮಾಡಿಲ್ಲ, ನಮ್ಮ ಹಕ್ಕು ನಮಗೆ ಕೊಟ್ಟಿದ್ದರೆ ನಾವ್ಯಾಕೆ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವು ಎಂದು ಆಕ್ರೋಶ ವ್ಯಕ್ತಪಡಿಸಿ, ಕಚೇರಿಯಿಂದ ಹೊರ ಬಂದು ಹೆದ್ದಾರಿ ತಡೆದು ಧಿಡೀರನೆ ಪ್ರತಿಭಟನೆಗೆ ಮುಂದಾದರು. ಇದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ರಸ್ತೆ ತೆರವು ಮಾಡುವಂತೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಹಲವು ಬಾರಿ ಪ್ರಯತ್ನಿಸಿದರೂ ಅದಕ್ಕೆ ಒಪ್ಪದೇ 20 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ನಂತರ ಡಿಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಚೇರಿ ಮುಂದೆ ನೀವು ಪ್ರತಿಭಟನೆ ಮಾಡಿ ಆದರೆ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಬೇಡಿ ಎಂದು ವಿನಂತಿಸಿದ ನಂತರ ಅಲ್ಲಿಂದ ಮತ್ತೆ ಎಸಿ ಕಚೇರಿ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಹೋರಾಟಗಾರರ ಮನವೊಲಿಸಿದರು, ಆದರೆ ನಮಗೆ ಚುನಾವಣೆ ದಿನಾಂಕ ಘೋಷಣೆಯಾದ ನಂತರವೇ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಸದಸ್ಯರು ಪಟ್ಟು ಹಿಡಿದರು. ಚುನಾವಣೆ ನಡೆಸುವುದು ಚುನಾವಣಾಧಿಕಾರಿ ಎಸಿ ವ್ಯಾಪ್ತಿಗೆ ಬರುತ್ತದೆ ಎಂದು ಎಡಿಸಿ ಹೇಳುತ್ತಿದ್ದಂತೆ ಕುಪಿತಗೊಂಡ ಬಿಜೆಪಿ ಸದಸ್ಯರು ಹಿರಿಯ ಸದಸ್ಯರಾಗಿ ನಿಮ್ಮ ಸೂಚನೆ ನೀಡಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮಿ ದಿಂಡೂರ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ವಿನಾಯಕ ಮಾನ್ವಿ, ಮುತ್ತು ಮುಶಿಗೇರಿ, ಪ್ರಕಾಶ ಅಂಗಡಿ, ಮಹಾಂತೇಶ ನಲವಡಿ, ಮಹೇಶ ದಾಸರ, ಶಿವರಾಜಗೌಡ ಹಿರೇಮನಿಪಾಟೀಲ ಮುಂತಾದವರು ಹಾಜರಿದ್ದರು.

ಬಾಕ್ಸ್

ಕಾಂಗ್ರೆಸ್ ನ ಇಬ್ಬರು ನಗರಸಭೆ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.‌ ಆದರೆ‌ ನ್ಯಾಯಾಲಯ‌ ಡಿಸೆಂಬರ್ ನಲ್ಲಿಯೇ ಪ್ರಕರಣ ವಜಾಗೊಳಿಸಿ ಸರ್ಕಾರದ ಮೀಸಲಾತಿ ಎತ್ತಿ ಹಿಡಿದಿದೆ. ಮೊದಲಿದ್ದ ಮೀಸಲಾತಿಯೇ ಮುಂದುವರೆಯಲಿದೆ. ಇದನ್ನು ಪ್ರಶ್ನಿಸಿ ಮತ್ತೆ ಕೆಲವರು ಕೋರ್ಟನ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಫೆ.12 ಕ್ಕೆ ನಡೆಯಲಿದ್ದು ಅಲ್ಲಿಯವರೆಗೂ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಮುಂದೂಡುವಂತೆ ಸಚಿವರು ಸೂಚನೆ ನೀಡಿದ್ದಾರೆ ಹಾಗಾಗಿ ಎಸಿ ಗಂಗಪ್ಪ ಎಂ ಅವರು ಸಚಿವರ ಅಣತಿಯಂತೆ ವರ್ತಿಸುತ್ತಿದ್ದಾರೆ ಎನ್ನುವ ಬಲವಾದ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.