ವಿದ್ಯುತ್ ತಾರತಮ್ಯ ನೀತಿ ವಿರೋಧಿಸಿ ಪ್ರತಿಭಟನೆ
KannadaprabhaNewsNetwork | Published : Oct 20 2023, 01:00 AM IST
ವಿದ್ಯುತ್ ತಾರತಮ್ಯ ನೀತಿ ವಿರೋಧಿಸಿ ಪ್ರತಿಭಟನೆ
ಸಾರಾಂಶ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ವತಿಯಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ಸರಕಾರವು ಕೃಷಿ ಪಂಪ್‌ಸೆಟ್‌ಗಳಿಗೆ 7ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಿಲ್ಲ ಎಂದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ಮುಖಂಡ ಲಕ್ಷ್ಮೀನಾರಾಯಣರೆಡ್ಡಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ವತಿಯಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ರಾಜ್ಯದ 190 ಕ್ಕಿಂತಲೂ ಹೆಚ್ಚು ತಾಲೂಕಿನಲ್ಲಿ ಬರ ಉದ್ಭವವಾಗಿದೆ. ಈ ತಾಲೂಕುಗಳು ಸಂಪೂರ್ಣ ಬರಗಾಲದ ಪ್ರದೇಶವೆಂದು ಘೋಷಿಸಲು ಸರ್ಕಾರವೇ ಶಿಫಾರಸ್ಸು ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೆಲವು ನೀರಾವರಿ ಜಲಾಶಯಗಳು ಇದ್ದರು 45 ಲಕ್ಷಕ್ಕಿಂತಲೂ ಹೆಚ್ಚು ರೈತರು ನೀರಾವರಿ ಪಂಪ್‌ಸೆಟ್‌ಗಳ ಕೃಷಿ ಮೇಲೆ ಅವಲಂಬನೆಯಾಗಿ ತೋಟಗಾರಿಕೆ ಫಸಲುಗಳು ಮತ್ತು ಇತರೆ ಫಸಲುಗಳನ್ನು ಬೆಳೆದಿರುತ್ತಾರೆ. ಪಂಪ್‌ಸೆಟ್‌ಗಳಿಗೆ ಪ್ರತಿ ದಿನ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವುದಾಗಿ ಹೇಳಿದ್ದ ಸರಕಾರ ಕೇವಲ 1-2 ಗಂಟೆಗಳು ಮಾತ್ರ ವಿದ್ಯುತ್ ನೀಡುವ ಮೂಲಕ ವಂಚನೆ ಮಾಡುತ್ತಿದೆ ಎಂದು ದೂರಿದರು. ಬರಗಾಲದಿಂದ ಉಂಟಾಗಿರುವ ವಿದ್ಯುತ್ ಕ್ಷಾಮದ ನಷ್ಟಕ್ಕೆ ಸರ್ಕಾರವೇ ನೇರ ಹೊಣೆ, ಸರ್ಕಾರದ ಈ ನಿರ್ಲಕ್ಷ ಮತ್ತು ಹೊಣೆಗೇಡಿತನವನ್ನು ಖಂಡಿಸಿ ರೈತ ಸಂಘಟನೆಗಳು ಬೀದಿಗೆ ಇಳಿದಿವೆ. ಇನ್ನಾದರೂ ಎಚ್ಚೆತ್ತುಕೊಂಡು ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿದಿನ7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ೭ ಗಂಟೆಗಳ ಕಾಲ ೩ ಫೇಸ್ ಗುಣಾತ್ಮಕ ವಿದ್ಯುತ್ ನೀಡಿ ರೈತರು ಬೆಳೆದಿರುವ ಫಸಲುಗಳನ್ನು ರಕ್ಷಣೆ ಮಾಡಬೇಕು ಮತ್ತು ಮುಂದೆ ವಿದ್ಯುತ್ ಕ್ಷಾಮ ತಲೆದೋರದಂತೆ ಎಚ್ಚರಿಕೆ ವಹಿಸಬೇಕು, ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿರುವ ವಿದ್ಯುತ್‌ಗೆ ಕಡಿವಾಣ ಹಾಕಬೇಕು ಎಂದರು. ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕು ಮತ್ತು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಕಡ್ಡಾಯ ಮಾಡಬೇಕು. ವಿದ್ಯುತ್ ಉಪಕೇಂದ್ರಗಳು ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಸುಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್ಫಾರಂಗಳನ್ನು ನಿಗದಿತ ಸಮಯದ ಒಳಗೆ ಬದಲಾಯಿಸಬೇಕು. ಸರ್ಕಾರ ಹಿಂದೆ ತೀರ್ಮಾನಿಸಿರುವಂತೆ ಕರ-ನಿರಾಕರಣ ಚಳುವಳಿಯಲ್ಲಿ ಉಳಿಸಿಕೊಂಡಿರುವ ಮನೆ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು ಮತ್ತು ಬೆಸ್ಕಾಂ ಕಿರುಕುಳವನ್ನು ತಪ್ಪಿಸಬೇಕು. ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ಲು ಹೋಬಳಿ ಪೆರೇಸಂದ್ರ ಗ್ರಾಮ ಪಂಚಾಯ್ತಿ ನಲ್ಲರಾಳ್ಳಹಳ್ಳಿ ಸುಮಾರು 10 ಮನೆಗಳಿಗೆ ವಿದ್ಯುತ್ ಸರಬರಾಜು ಸಂಪರ್ಕ ಕಲ್ಪಿಸಿಕೊಡಬೇಕುಎಂದು ಸರ್ಕಾರಕ್ಕೆ ಹಕ್ಕೋತ್ತಾಯಗಳನ್ನು ಮಂಡಿಸಿದರು ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅರುಣ್‌ಕುಮಾರ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಶಂಕರನಾರಾಯಣ, ರಾಮಾಂಜಿ, ಮಾರುತಿ, ಚನ್ನೇಗೌಡ,ಎಸ್.ಎಂ.ರವಿಪ್ರಕಾಶ್, ತ್ಯಾಗರಾಜು, ರಾಮರೆಡ್ಡಿ, ಶ್ರೀನಿವಾಸ್.ಕೆ., ಸೂರಿಬಾಬು, ಅನಸೂಯಮ್ಮ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಈಶ್ವರ್‌ರೆಡ್ಡಿ ಮತ್ತಿತರರು ಇದ್ದರು.