ಸಾರಾಂಶ
- ರಾಜ್ಯ ರೈತ ಸಂಘ-ಹಸಿರು ಸೇನೆ ನೇತೃತ್ವದಲ್ಲಿ ಹೋರಾಟ - - -
* ಪ್ರಮುಖ ಬೇಡಿಕೆಗಳೇನು? - ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಕೆಗೆ ₹10 ಸಾವಿರ ಠೇವಣಿ ಶುಲ್ಕ ನಿಗದಿ ಕ್ರಮ ಹಿಂಪಡೆಯಬೇಕು -ಕೇಂದ್ರ, ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರ ಖಾಸಗೀಕರಣ ನಿಲ್ಲಿಸಬೇಕು.
- ರೈತರಿಗೆ ವಿದ್ಯುತ್ ಪರಿಕರಗಳನ್ನು ಅಕ್ರಮ- ಸಕ್ರಮದಡಿ ಹಿಂದೆ ನೀಡುತ್ತಿದ್ದಂತೆ ಉಚಿತ ವಿದ್ಯುತ್ ಸೌಲಭ್ಯ ರೈತರಿಗೆ ನೀಡಬೇಕು- ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ನೀತಿಯನ್ನೂ ಕೈಬಿಡಬೇಕು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯುತ್ ಖಾಸಗೀಕರಣ ವಿರೋಧಿಸಿ ಏ.15ರಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಇಂಧನ ಸಚಿವರ ಅಣಕು ಶವಯಾತ್ರೆ, ಪ್ರತಿಕೃತಿ ದಹನ ಹಾಗೂ ಬೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕುವ ಹೋರಾಟವನ್ನು ದಾವಣಗೆರೆ ನಗರ ಸೇರಿದಂತೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಇಂಧನ ಸಚಿವರ ಅಣಕು ಶವಯಾತ್ರೆ ಮೆರವಣಿಗೆ ನಡೆಸಿ, ಪ್ರತಿಕೃತಿ ದಹಿಸಲಾಗುವುದು. ಬಳಿಕ ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಕಚೇರಿವರೆಗೆ ರೈತ ಸಂಘ- ಹಸಿರು ಸೇನೆ ನೇತೃತ್ವದಲ್ಲಿ ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು.
ಶೀಘ್ರ ಯೋಜನೆಯಲ್ಲಿ ಸರ್ಕಾರ ಟಿ.ಸಿ.ಗಳನ್ನು ಮಾತ್ರ ನೀಡಲಿದೆ. ಉಳಿದ ಕಂಬ ಮತ್ತು ವೈಯರ್‌ಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವಿಲ್ಲ. ಸರ್ಕಾರವೇ ಉಚಿತವಾಗಿ ಈ ಸೌಲಭ್ಯ ಕಲ್ಪಿಸಿಕೊಡಬೇಕು. ಜಮೀನಿನಲ್ಲಿ ವಾಸಿಸುವ ರೈತರ ಶಾಲಾ-ಕಾಲೇಜು ಓದುತ್ತಿರುವ ಮಕ್ಕಳಿಗೆ, ಹೈನುಗಾರಿಕೆ ಮಾಡುವಂತಹ ರೈತಾಪಿ ಕುಟುಂಬಗಳಿಗೆ ಅನುಕೂಲ ಆಗುವಂತೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೆ ಸಮರ್ಪಕ, ಯೋಗ್ಯ ವಿದ್ಯುತ್ ಪೂರೈಸಬೇಕು. ನಗರ, ಗ್ರಾಮೀಣ ಪ್ರದೇಶವೆನ್ನದೇ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದರು.11 ಕೆವಿ ಮತ್ತು ಎಲ್‌ಟಿ ಮಾರ್ಗಗಳಲ್ಲಿ 15 ವರ್ಷಗಳಿಂದ ಬೆಳೆದಿರುವ ಗಿಡ ಮರಗಳು ತಂತಿಗಳಿಗೆ ತಾಗಿ ವಿದ್ಯುತ್ ಹರಿದು ಕೃಷಿ ಪಂಪ್ ಸೆಟ್, ಟಿಸಿ ಮೋಟಾರ್, ಕೇಬಲ್‌ಗಳು ಸುಟ್ಟು, ರೈತರಿಗೆ ಲಕ್ಷಾಂತರ ರು. ನಷ್ಟವಾಗುತ್ತದೆ. ಬೆಸ್ಕಾಂಗೂ ಪ್ರತಿವರ್ಷ ಕೋಟ್ಯಾಂತರ ರು. ನಷ್ಟವಾಗುತ್ತಿದ್ದರೂ ಅಧಿಕಾರಿಗಳು ಜಂಗಲ್ ತೆರವುಗೊಳಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ತಕ್ಷಣವೇ ಬೆಸ್ಕಾಂ ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮಕ್ಕೆ ಸೂಚನೆ ನೀಡದಿದ್ದರೆ, ಜನಪ್ರತಿನಿಧಿಗಳ ನಿವಾಸಿಗಳ ಮುಂದೆಯೇ ಉಗ್ರ ಪ್ರತಿಭಟನೆ ನಡೆಸಬೇಕಾದೀತು ಎಂದು ಬಸವರಾಜ ಎಚ್ಚರಿಸಿದರು.
ಸಂಘದ ಮುಖಂಡರಾದ ವಟಿಗನಹಳ್ಳಿ ಸುನೀಲ, ಚಿಕ್ಕಬೂದಿಹಾಳ ಭಗತ್ ಸಿಂಹ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಚಿಕ್ಕತೊಗಲೇರಿ ಮಲ್ಲಿಕಪ್ಪ, ಕೋಲ್ಕುಂಟೆ ಉಚ್ಚೆಂಗೆಪ್ಪ, ಕುರ್ಕಿ ಹನುಮಂತಪ್ಪ ಇತರರು ಇದ್ದರು.- - -
-12ಕೆಡಿವಿಜಿ14:ದಾವಣಗೆರೆಯಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
;Resize=(128,128))
;Resize=(128,128))
;Resize=(128,128))