ಕನ್ನಡಪ್ರಭ ವಾರ್ತೆ ಹಿರಿಯೂರು
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಹಿರಿಯೂರು ಸಮಿತಿ (659)ಯ ವತಿಯಿಂದ ವಿದ್ಯುತ್ ವಿತರಣಾ ಮತ್ತು ಪ್ರಸರಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯನ್ನು ವಿರೋಧಿಸಿ ನಗರದ ಬೆವಿಕಂ ವಿಭಾಗೀಯ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾ ನಿರತರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡುವ ಉದ್ದೇಶದಿಂದ ರಾಜ್ಯದ 19 ಕಂದಾಯ ಜಿಲ್ಲೆಗಳಲ್ಲಿ ದ ಟಾಟಾ ಪವರ್ ಕಂಪನಿಯು ವಿದ್ಯುತ್ ವಿತರಣೆಯ ಲೈಸೆನ್ಸ್ ಕೋರಿ ಸಲ್ಲಿಸಿರುವ ಮನವಿಯ ವಿರುದ್ಧವಾಗಿ ರಾಜ್ಯ ರೈತ ಸಂಘ ಮತ್ತು ಬೆಸ್ಕಾಂ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿಭಟನೆ ಕೈಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಸಾರ್ವಜನಿಕ ವಿರೋಧಿ ನೀತಿ ಅನುಸರಿಸುತ್ತಿವೆ. ರಾಜ್ಯ ಸರ್ಕಾರ 1992 ರಿಂದ ರೈತರ ಪಂಪ್ ಸೆಟ್‌ಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು ಬಡ ಕುಟುಂಬಗಳಿಗೂ ಸಹ ಉಚಿತ ವಿದ್ಯುತ್ ನೀಡಲಾಗುತ್ತಿದೆ.ವಿದ್ಯುತ್ ಖಾಸಗೀಕರಣ ಮಾಡಿದರೆ ರಾಜ್ಯದ ಏಳು ಕೋಟಿ ಜನಸಾಮಾನ್ಯರಿಗೂ ಮತ್ತು ರೈತರಿಗೂ ಭಾರಿ ಆರ್ಥಿಕ ಹೊರೆ ಬೀಳಲಿರುವುದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಗೊಳಿಸಬಾರದು.
ದ ಟಾಟಾ ಪವರ್ ಕಂಪನಿ ನೀಡಿರುವ ಮನವಿಯನ್ನು ತಿರಸ್ಕರಿಸಿ ಈಗ ಇರುವಂತೆಯೇ ವಿದ್ಯುತ್ ಸರಬರಾಜನ್ನು ಮುಂದುವರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯಾದ್ಯಂತ ರೈತರು, ವಿದ್ಯುತ್ ಇಲಾಖೆಯ ಎಂಜಿನಿಯರ್‌ಗಳು, ಸಿಬ್ಬಂದಿ ಹಾಗೂ ಜನಸಾಮಾನ್ಯರು ಅನೇಕ ಸಂಘಟನೆಗಳು ಹೋರಾಟ ನಡೆಸುತ್ತಿದ್ದು ಸರ್ಕಾರ ವಿದ್ಯುತ್ ಖಾಸಗೀಕರಣ ಗೊಳಿಸಲು ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಈ ತಿಂಗಳ 23 ರಂದು ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದ್ದು ವಿದ್ಯುತ್ ಖಾಸಗೀಕರಣಕ್ಕೆ ಮುಂದಾದಲ್ಲಿ ತಾಲೂಕಿನ ಜನಪರ ಸಂಘಟನೆಗಳ ಸಹಯೋಗದಲ್ಲಿ ಹಿರಿಯೂರು ಬಂದ್ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.ರೈತ ಮುಖಂಡ ಕಸವನಹಳ್ಳಿ ರಮೇಶ್ ಮಾತನಾಡಿ, ಬೆಸ್ಕಾo ನೌಕರರು ಒಗ್ಗಟ್ಟಿನಿಂದ ಹೋರಾಟ ಮಾಡಿ ನ್ಯಾಯ ಪಡೆಯಬೇಕು. ಡಿಕೆಶಿ, ಸಿದ್ದರಾಮಯ್ಯನವರು ಖಾಯಂ ಆಗಿ ಏನು ಆಡಳಿತದಲ್ಲಿ ಇರುವುದಿಲ್ಲ. ಆದರೆ ಬೆಸ್ಕಾo ಇಲಾಖೆ ಖಾಯಂ ಆಗಿರುವುದು ಎಂಬುದನ್ನು ಅವರು ಮರೆಯಬಾರದು. ಈ ಇಲಾಖೆ ಉಳಿಯಬೇಕು. ಇದು ಏಳು ಕೋಟಿ ಕನ್ನಡಿಗರ ಆಸ್ತಿಯಾಗಿದ್ದು ಅವರೇ ಮಾಲೀಕರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕವಿಪ್ರನಿ ನೌಕರರ ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್, ಕಾರ್ಯದರ್ಶಿ ಮುಸ್ತಾಕ್ ಮಹಮ್ಮದ್, ಕೇಂದ್ರ ಸಮಿತಿ ಸದಸ್ಯ ಸುರೇಶ್ ಬಾಬು, ರೈತ ಮುಖಂಡರಾದ ಬಿಓ ಶಿವಕುಮಾರ್, ದಸ್ತಗಿರಿ ಸಾಬ್, ಕೆಟಿ ತಿಪ್ಪೇಸ್ವಾಮಿ, ಬಿ ಡಿ ಶ್ರೀನಿವಾಸ್ ,ವೆಂಕಟೇಶ್,ಎಂಪಿ ನಾಗರಾಜ್,ಉಮಾಪತಿ, ಪುನೀತ್ ಗೌಡ, ಈಶ್ವರಗೆರೆ ನಾಗರಾಜು, ಶ್ರೀನಿವಾಸ್, ಅನ್ಸರ್ ಅಲಿ ಹಾಗೂ ಬೆವಿಕಂ ಮತ್ತು ಕವಿಪ್ರನಿನಿಯ ಒಕ್ಕೂಟದ ಸದಸ್ಯರು, ಅಧಿಕಾರಿಗಳು, ನೌಕರರು, ವಿದ್ಯುತ್ ಗುತ್ತಿಗೆದಾರರು, ನಿವೃತ್ತ ಅಧಿಕಾರಿಗಳು,ಗ್ರಾಮ ವಿದ್ಯುತ್ ಪ್ರತಿನಿಧಿಗಳು ಹಾಗೂ ಹೊರಗುತ್ತಿಗೆ ನೌಕರರು ಹಾಜರಿದ್ದರು.