ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನಬೇಲೂರು ತಾಲೂಕಿನ ಅರೆಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ತನಿಖೆ ಮಾಡಿಸಬೇಕು ಹಾಗೂ ಸಕಲೇಶಪುರ ತಾಲೂಕಿನ ದೊಡ್ಡ ಸತ್ಗಲ್ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಡೀಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರೆಹಳ್ಳಿ ನಿಂಗರಾಜು ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕು, ಅರೇಹಳ್ಳಿ ಗ್ರಾಪಂ ಸರ್ಕಾರಿ ಸರ್ವೆ ನಂಬರ್ ೧೩ ರಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಒತ್ತುವರಿ ಮಾಡಿರುವರು ಸರ್ಕಾರಿ ಉದ್ಯೋಗಿಯು ಆಗಿರುವುದರಿಂದ ಇಲಾಖೆ ತನಿಖೆ ನಡೆಸಿ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಸರಕಾರಿ ಜಮೀನಿನಲ್ಲಿ ಪ್ರಸ್ತುತ ಅರೇಹಳ್ಳಿ ಸಂತೆ ನಡೆಯುತ್ತಿದು, ಅದೇ ಜಮೀನಿನ ಸುಮಾರು ೧೦ ಗುಂಟೆ ಜಮೀನನ್ನು ಅರೇಹಳ್ಳಿ ಗ್ರಾಪಂ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೂಪ ಎಂಬ ಉದ್ಯೋಗಿ ನಕಲಿ ದಾಖಲೆ ಸೃಷ್ಟಿಸಿ ತನ್ನ ತಂದೆ ಸುಂದರ್ ರೈ ಹಾಗೂ ತಾಯಿ ಅಪ್ಪಿ ಎಂಬುವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ದೂರಿದರು.
೧೯೮೬-೮೭ ರಲ್ಲಿ ಸಾರ್ವಜನಿಕ ಬಳಕೆಗಾಗಿ ಕೊರೆಸಿದ ಕೊಳವೆ ಬಾವಿ ನಾಶಪಡಿಸಿ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿ, ರಸ್ತೆ ನೀರು ಹರಿಯಲು ಚರಂಡಿಗೆ ಸಹ ಜಾಗ ಬಿಡದೆ ಒತ್ತುವರಿ ಮಾಡಿರುತ್ತಾರೆ. ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸರ್ಕಾರಿ ಉದ್ಯೋಗಿಯಾಗಿದ್ದುಕೊಂಡು ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯ ಲೋಪ ಎಸೆಗಿರುತ್ತಾರೆ. ಇವರ ಮೇಲೆ ಇಲಾಖೆ ತನಿಖೆ ನಡೆಸಬೇಕು ಮತ್ತು ಈ ಜಮೀನು ಹಾಗೂ ಕೊಳವೆ ಬಾವಿಗೆ ಸಂಬಂಧಿಸಿದ ಇಲಾಖೆಯು ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಎಂದರು. ಈ ಜಮೀನಿನ ಸರ್ವೆ ಕಾರ್ಯವು ಪೂರ್ಣಗೊಂಡಿದ್ದರೂ ಸಹ ಕಂದಾಯ ಇಲಾಖೆ ಗ್ರಾಪಂಗೆ ಜಾಗ ತೆರವುಗೊಳಿಸಲು ಸೂಚನೆ ನೀಡಿದರೂ ಸಹ ಗ್ರಾಪಂ ಅಧಿಕಾರಿ ಹಾಗೂ ಸದಸ್ಯರುಗಳು ಒತ್ತುವರಿದಾರರಿಗೆ ಬೆಂಬಲಿಸುತ್ತಿರುವುದರಿಂದ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾನೂನಿನಡಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಮನವರಿಕೆ ಮಾಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುವುದರ ಜೊತೆಗೆ ಸದರಿ ಭೂಮಿಯು ಕಂದಾಯ ಇಲಾಖೆಗೆ ಸಂಬಂಧಪಟ್ಟರುವುದರಿಂದ, ಕಂದಾಯ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಈ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.ಸಕಲೇಶಪುರ ತಾಲೂಕು, ದೊಡ್ಡ ಸತ್ತಲ್ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಸ್ಥಾಪಿಸಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರಾಣ ಹಾನಿ ತಪ್ಪಿಸಬೇಕು. ಸಕಲೇಶಪುರ ತಾಲೂಕು, ದೊಡ್ಡ ಸತ್ತಲ್ ಗ್ರಾಮದಲ್ಲಿ ಸುಮಾರು ೫೦ ದಲಿತ ಬಡ ಕುಟುಂಬಗಳು ವಾಸ ಮಾಡುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಬಂಧ ಪಟ್ಟ ಅಂಗನವಾಡಿ ಕೇಂದ್ರದಲ್ಲಿ ಸುಮಾರು ೨೦ ಮಕ್ಕಳು ಕಲಿಕೆಯಲ್ಲಿದ್ದು, ಅಂಗನವಾಡಿ ಶಿಕ್ಷಕಿ ಹೇಳಿಕೆಯ ಪ್ರಕಾರ ೨೫ ಬಾಣಂತಿಯರಿದ್ದು, ಸದರಿ ಅಂಗನವಾಡಿ ಕೇಂದ್ರವು ಖಾಸಗಿಯವರ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದೆ ಎಂದರು.
ಈ ಕಟ್ಟಡವು ಇಂದೂ ನಾಳೆಯೋ ಬೀಳುವಂತಹ ಪರಿಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತೆಯಿಂದ ಮಹಿಳೆಯರು ಮತ್ತು ಮಕ್ಕಳ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ನಿವೇಶನ ಮಂಜೂರು ಮಾಡಿಸಿ, ಈ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಆದೇಶಿಸಬೇಕಾಗಿ ಕೋರಿದರು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಬ್ಯಾಕರವಳ್ಳಿ, ಚಂದ್ರಗುಪ್ತ ಮೌರ್ಯ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಬಾಗಿವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳುವಾರೆ, ರಾಘವೇಂದ್ರ, ಕೀರ್ತಿರಾಜ್, ರಮೇಶ್, ಶೇಖರ್, ಕಾಂತರಾಜು, ಲಕ್ಷ್ಮಣ್ ಉಪಸ್ಥಿತರಿದ್ದರು.