ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿ, ಕ್ರಮ ಕೈಗೊಳ್ಳದ ಇಒ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು ಜಂಟಿಯಾಗಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿ ಇಒ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.ಕಸಬಾ ಹೋಬಳಿ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಕಟ್ಟಡದ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರ ಭಾವಚಿತ್ರ ಹಾಕಲಾಗಿದೆ. ಹಾಲಿ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಭಾವಚಿತ್ರವನ್ನು ಹಾಕದೆ ಶಿಷ್ಟಾಚಾರ ಉಲ್ಲಂಘನೆ ಮಾಡಿ ಅಪಮಾನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಸಂಬಂಧ ಕಟ್ಟಡ ಉದ್ಘಾಟನೆಗೂ ಮುಂಚಿತವಾಗಿ ಇಒ ಅವರ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳು ಸರ್ಕಾರದ ನಿಯಮದಂತೆ ಸಂವಿಧಾನದ ಅಡಿಯಲ್ಲಿ ಕೆಲಸವನ್ನು ಮಾಡಬೇಕು, ಯಾವುದೇ ಪಕ್ಷದ ಪರವಾಗಿ ಏಜೆಂಟರಂತೆ ಕೆಲಸ ಮಾಡಬಾರದು, ಆದರೆ ಕನಕಪುರ ತಾಲೂಕಿನಲ್ಲಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡುತ್ತಾರೆ, ಟಿ.ಬೇಕುಪ್ಪೆ ಪಿಡಿಒ ತಪ್ಪು ಎಸಗಿದ್ದರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅವರು ಸಹ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರ ಯಾರಿಗೂ ಶಾಶ್ವತವಾದುದಲ್ಲ, ಸರ್ಕಾರಗಳು ಬದಲಾಗುತ್ತಲೇ ಇರುತ್ತವೆ, ಆದರೆ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಮಾತ್ರ ಬದಲಾಗುವುದಿಲ್ಲ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕಿದೆ, ಆದರೆ ಕನಕಪುರ ತಾಲೂಕಿನಲ್ಲಿ ಸಂವಿಧಾನ ಬಾಹಿರವಾಗಿ, ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.ಡಿ.ಕೆ.ಸುರೇಶ್ ಮೂರು ಬಾರಿ ಸಂಸದರಾಗಿದ್ದವರು ಇಂದು ಸಂಸದರೊಬ್ಬರ ಭಾವಚಿತ್ರ ಹಾಕದಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಅಪಮಾನವನ್ನು ಮಾಡಿ ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರೆ, ಇದರಿಂದ ಮಂಜುನಾಥ್‌ಗೆ ಅಪಮಾನ ಆಗುವುದಿಲ್ಲ, ಕ್ಷೇತ್ರದ ಮತದಾರರು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ ಗೌರವ ನೀಡಿದ್ದಾರೆ, ಇದನ್ನು ಸುರೇಶ್ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.
ಪಂಚಾಯಿತಿ ಕಟ್ಟಡದ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸದೆ ಉಲ್ಲಂಘನೆ ಮಾಡಿರುವ ಪಿಡಿಒ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿರುವ ಇಒ ಅವರನ್ನು ಈ ಕೂಡಲೇ ಅಮಾನತು ಮಾಡಬೇಕು ಹಾಗೂ ಆಗಿರುವ ತಪ್ಪನ್ನು ಮೂರು ದಿನಗಳಲ್ಲಿ ಸರಿಪಡಿಸಿ ಒತ್ತಾಯಿಸಿ ತಹಸೀಲ್ದಾರ್ ಸಂಜಯ್ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದರು.ಇಒ ಅವಿನಾಶ್ ಅದಕ್ಕೆ ಉತ್ತರಿಸಿ,ನೀವು ನನಗೆ ದೂರು ನೀಡಿದ್ದೀರಿ, ನಾನು ಪಿಡಿಒ ಅವರಿಗೆ ನೋಟಿಸ್ ನೀಡಿದ್ದೇನೆ. ಅವರಿಂದ ಉತ್ತರ ಬಂದ ಮೇಲೆ ಶಿಷ್ಟಾಚಾರ ಉಲ್ಲಂಘನೆ ಸಂಬಂಧ ಕ್ರಮ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಿ ನಾಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ದಿಶಾ ಕಮಿಟಿ ಸದಸ್ಯರಾದ ರಾಜೇಶ್, ಶೋಭಾ, ಶ್ರೀನಿವಾಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರಾದ ನಲ್ಲಳ್ಳಿ ಕುಮಾರ್, ಚಿನ್ನಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ, ಸ್ಟುಡಿಯೋ ಚಂದ್ರು,ಜೆಡಿಎಸ್- ಬಿಜೆಪಿ ಮುಖಂಡರಾದ ಯೋಗೇಶ್, ಕಾಳೇಗೌಡ, ಪಾಲಾಕ್ಷ, ಶೇಖರ್, ಅಶ್ವಥ್, ಮರಿಯಪ್ಪ, ತಿಮ್ಮೇಗೌಡ, ಶಿವಪ್ರಸಾದ್, ಕುಮಾರಸ್ವಾಮಿ, ರಾಮು, ರಾಜೇಂದ್ರ, ತಿಮ್ಮಪ್ಪ, ಕೆಂಪರಾಜು, ಯೂನಸ್ ಅಲಿಖಾನ್, ಶಿವರಾಜು, ಸ್ವಾಮಿಗೌಡ, ಶಶಿಕಲಾ, ಮಂಜುಳಾ, ರಮೇಶ್, ಶಾಂತಿ ಮೇರಿ, ಪವಿತ್ರ, ಮಮತಾ ನಾರಾಯಣ್, ರತ್ನಮ್ಮ ಮಹದೇವಮ್ಮ, ಮಂಜುಳಾ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 04:
;Resize=(128,128))
;Resize=(128,128))