ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತಾಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ರೈತರಿಂದ ಸಾಕಷ್ಟು ದೂರುಗಳು ಬರುತ್ತಿವೆ. ರೈತರ ಬೆಳೆಯನ್ನು ಇದೇ ರೀತಿ ಆನೆಗಳು ಹಾಳು ಮಾಡುತ್ತಿದ್ದರೆ ರೈತರು ಏನೂ ಮಾಡಬೇಕು? ಆನೆ ದಾಳಿಗೆ ಯಾರಾದರೂ ಬಲಿಯಾದರೆ ಅದಕ್ಕೆ ಯಾರು ಹೊಣೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತರಾಟೆಗೆ ತೆಗೆದುಕೊಂಡರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಅಧಿಕಾರಿಗಳು ಆನೆ ಹಾವಳಿ ತಡೆಯಲು 10ರಿಂದ 15 ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಆನೆಗಳನ್ನು ಈ ಭಾಗದಿಂದ ಭದ್ರಾ ಕಡೆ ಕಳುಹಿಸುವ ಕೆಲಸ ಆಗಬೇಕು. ಹಾನಿಗೊಳಗಾದ ಕುಟುಂಬಗಳಿಗೆ ಬೆಳೆನಷ್ಟ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.
ಕಾಡಾನೆಯೋ, ಸಾಕಾನೆಯೋ?:ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಸಭೆಯಲ್ಲಿ ಮಾತನಾಡಿ, ಶಿವಮೊಗ್ಗ ತಾಲೂಕಿನ ಮಲೆಶಂಕರ, ತಮ್ಮಡಿಹಳ್ಳಿ, ಶೆಟ್ಟಿಹಳ್ಳಿ, ಪುರದಾಳು ಭಾಗಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ಮೆಕ್ಕೆಜೋಳ, ಅಡಕೆ ತೋಟಗಳನ್ನು ನಾಶ ಮಾಡಿವೆ. ಅಲ್ಲಿನ ರೈತರು ಇವು ಕಾಡಾನೆ ಅಲ್ಲ, ಸಾಕಾನೆ ಎನ್ನುತ್ತಿದ್ದಾರೆ. ಸಕ್ರೆಬೈಲಿನ ಆನೆಗಳು ಬೆಳೆ ಹಾನಿ ಮಾಡುತ್ತಿವೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ, ಪೂರಕವಾಗಿ ಸ್ಪಂದನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಸಾಕಾನೆಯಿಂದ ಬೆಳೆ ಹಾನಿ ಆಗುತ್ತಿಲ್ಲ. ಸಾಕಾನೆಗಳಿಗೆ ಚೈನ್ ಹಾಕಲಾಗಿರುತ್ತದೆ. ಕಾಡಾನೆಗಳು ಬೆಳೆ ಹಾನಿ ಮಾಡುತ್ತಿವೆ ಎನ್ನುತ್ತಿದ್ದಂತೆ ಶಾಸಕಿ ಶಾರದಾ, ರೈತರಿಗೆ ಕಾಡಾನೆ ಯಾವುದು, ಸಾಕಾನೆ ಯಾವುದು ಎಂದು ಗೊತ್ತಿರುತ್ತದೆ. ಆನೆಗಳು ಗುಂಪಾಗಿ ಬಂದು ದಾಳಿ ಮಾಡುತ್ತಿವೆ. ಗುಂಪಾಗಿ ಬರುವಷ್ಟು ಕಾಡಾನೆಗಳು ತಾಲೂಕು ಭಾಗದಲ್ಲಿ ಇವೆಯೇ ಎಂದು ಪ್ರಶ್ನಿಸಿದರು.ಬೀದಿನಾಯಿಗಳ ಹಾವಳಿ ತಡೆಯಿರಿ:
ಸಭೆಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಆಗುತ್ತಿರುವ ಪರಿಣಾಮವನ್ನು ತಿಳಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು, ಕೇವಲ ನಗರದಲ್ಲಿ ಮಾತ್ರ ಬೀದಿ ನಾಯಿಗಳ ಹಾವಳಿ ಇಲ್ಲ. ಇಡೀ ಜಿಲ್ಲೆಯಲ್ಲಿ ಇದೆ. ಮಕ್ಕಳು, ವೃದ್ದರ ಮೇಲೆ ಬೀದಿನಾಯಿಗಳು ಹಾನಿ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬೀದಿನಾಯಿಗಳ ನಿಯಂತ್ರಣ ಆಗಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಧ್ವನಿಗೂಡಿಸಿದ ಸಚಿವ ಮಧು ಬಂಗಾರಪ್ಪ ಈಚೇಗೆ ನನ್ನ ಎದುರೇ ಹುಚ್ಚು ಹಿಡಿದಿದೆ ಎಂದು ಜನರು ನಾಯಿಯನ್ನು ಹೊಡೆದು ಸಾಯಿಸಿದ್ದನ್ನು ನಾನು ನೋಡಿದ್ದೇನೆ. ಪ್ರಾಣಿ ರಕ್ಷಣೆ ಮಾಡಬೇಕು ಎಂದು ಜನರು ನಾಯಿಗಳಿಂದ ಕಡಿಸಿಕೊಳ್ಳುವುದಕ್ಕೆ ಆಗಲ್ಲ. ಹೀಗಾಗಿ ಅಧಿಕಾರಿಗಳು ಈ ಬಗ್ಗೆ ಗಮನ ಕೊಡಬೇಕು. ಮಹಾನಗರ ಪಾಲಿಕೆ, ನಗರಸಭೆ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗೆ ಸರ್ಕಾರ ಹೊಸ ನಿಯಮ ಮಾಡಿದ್ದು, ಟಿ.ಸಿ. 500 ಟರ್‌ಗಿಂತ ದೂರವಿದ್ದಲ್ಲಿ ಅಂಥವರು ಸೋಲಾರ್ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ. ಇದಕ್ಕೆ ಸಬ್ಸಿಡಿ ಇದ್ದರೂ ರೈತರು ತಕ್ಷಣ ಸುಮಾರು ₹1 ಲಕ್ಷ ಭರಿಸಬೇಕು, ಹಿಂಗಾದರೆ 1 ಟಿ.ಸಿ.ಗೆ 20 ಸಾವಿರ ಕಟ್ಟಿದರೇ ಸಾಕು, ಹಲವು ರೈತರಿಗೆ ಅನುಕೂಲ ಆಗುತ್ತಿತ್ತು. ಆದ್ದರಿಂದ ರೈತರಿಗೆ ಅನುಕೂಲ ರೀತಿಯಲ್ಲಿ ಈ ಯೋಜನೆ ಜಾರಿ ಮಾಡಬೇಕು ಎಂದರು.ಬೆಳೆವಿಮೆಯಲ್ಲಿ ಜಿಲ್ಲೆಯೇ ಪ್ರಥಮ:
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಅನಾವೃಷ್ಠಿ ಯಿಂದಾಗಿ ₹80.70 ಕೋಟಿ ಪರಿಹಾರದ ಅಗತ್ಯವಿದೆ ಎಂದು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಅಲ್ಲದೇ, ಬೆಳೆ ವಿಮೆ ಮಾಡಿಸಿದ್ದರಲ್ಲಿ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ, ಡಿಡಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಇದ್ದರು.
- - - ಬಾಕ್ಸ್-1ಚನ್ನಬಸಪ್ಪ, ಮಧು ಬಂಗಾರಪ್ಪ ಮಾತಿನ ಚಕಮಕಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತೈಮಾಸಿಕ ಕೆಡಿಪಿ ಸಭೆಯ ಆರಂಭದಲ್ಲಿ ಬರಗಾಲ ಪರಿಹಾರ ವಿಚಾರವಾಗಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಡುವೆ ಮಾತಿನ ಚಕಮಕಿ ನಡೆಯಿತು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಬರ ಸಂಬಂಧ ಮಾಹಿತಿ ನೀಡುತ್ತಿದ್ದಂತೆ, ಶಾಸಕ ಚನ್ನಬಸಪ್ಪ ಅವರು ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಕೇಳಿದ್ದಾರೆ. ಆದರೆ, ಸರ್ಕಾರ ಜಿಲ್ಲೆಯ ಎಲ್ಲ ತಾಲೂಕನ್ನು ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದರೆ, ಈವರೆಗೆ ಬರಗಾಲ ಪರಿಹಾರ ಬಂದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ರೈತರ ಬಗ್ಗೆ ಇಷ್ಟೊಂದು ತತ್ಸಾರ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸರ್ಕಾರ ಬರಗಾಲ ಎಂದು ಘೋಷಣೆ ಮಾಡಿದೆ. ಈ ಸಂಬಂಧ ಎಷ್ಟು ಮಳೆ ಕೊರತೆ ಆಗಿದೆ, ಜಿಲ್ಲೆಯಲ್ಲಿ ಬೆಳೆನಷ್ಟ ಎಷ್ಟಾಗಿದೆ ಬಗ್ಗೆ ಸಮಗ್ರ ವರದಿ ಕೊಡಲು ಮಾರ್ಗಸೂಚಿ ನೀಡಿದೆ. ಆದರೆ, ಈಗ ಸರ್ವೆ ಮಾಡಿದರೆ ಹಸಿರು ಬೆಳೆಯೇ ಕಾಣುತ್ತದೆ. ಈಗಲೇ ಬೆಳೆ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಕೊಡುವುದು ಕಷ್ಟವಾಗುತ್ತದೆ. ನ.15ರವರೆಗೆ ವರದಿ ಸಲ್ಲಿಸಲು ಅವಕಾಶ ಇದೆ. ವರದಿ ಸಲ್ಲಿಸಿದ ಬಳಿಕ ಸರ್ಕಾರದಿಂದ ಅನುದಾನ ಬರಲಿದೆ ಎಂದು ತಿಳಿಸಿದರು.ಈ ವೇಳೆ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಅಸಡ್ಡೆ ತೋರುತ್ತಿದೆ ಎಂದು ತೀವ್ರ ಆರೋಪ ಮಾಡಿದ ಶಾಸಕರು, ಏರುಧ್ವನಿಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಾಸಕರಿಗೆ ಮಾಹಿತಿ ಸರಿಯಾಗಿ ಗೊತ್ತಿಲ್ಲ ಎಂದು ಕಾಣುತ್ತದೆ ಎಂದರು. ಕೂಡಲೇ ಪ್ರತಿಕ್ರಿಯೆ ನೀಡಿದ ಶಾಸಕ ಚನ್ನಬಸಪ್ಪ, ಸ್ವಾಮಿ ನಿಮಗೆ ಬರದ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಡಬೇಕು. ಆದರೆ, ನಾವು ರೈತರ ಮಧ್ಯೆಯೇ ಇರುವುದು. ನಾವು ನಿತ್ಯ ಫಿಲ್ಡ್‌ಗೆ ಹೋಗುತ್ತೇವೆ. ನಾನು ಮಾಹಿತಿ ತೆಗೆದುಕೊಂಡೇ ಬಂದಿದ್ದೇನೆ. ನನಗೆ ಮಾಹಿತಿ ಕೊರತೆ ಇಲ್ಲ ಎಂದು ಖಾರವಾಗಿಯೇ ಉತ್ತರಿಸಿದರು.
ಸಭೆಯಲ್ಲಿ ಶಾಸಕರಾದ ಶಾರದಾ ಪೂರ್‍ಯನಾಯ್ಕ, ಎಸ್. ರುದ್ರೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಎಂ. ಮತ್ತಿತರರಿದ್ದರು- - - ಬಾಕ್ಸ್-2ಶಿಷ್ಟಾಚಾರ ಬಗ್ಗೆ ಅಧಿಕಾರಿಗಳು ಗಮನಹರಿಸಲಿ: ಸಂಸದ ಜಿಲ್ಲೆಯಲ್ಲಿ ಈ ಹಿಂದೆ ಉದ್ಘಾಟನೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮತ್ತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈಚೇಗೆ ಮತ್ತೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ನಮಗ್ಯಾರಿಗೂ ಮಾಹಿತಿ ಇಲ್ಲ. ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರೆ ಏನರ್ಥ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಿಷ್ಟಚಾರ ಉಲ್ಲಂಟನೆ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಹೆಚ್ಚು ಪ್ರಕರಣಗಳು ಇರುತ್ತವೆ. ಅಧಿಕಾರಿಗಳು ಶಿಷ್ಟಚಾರದ ಬಗ್ಗೆ ಗಮನಹರಿಸಬೇಕು. ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೆ ಕಾಮಗಾರಿ ಉದ್ಘಾಟನೆ ಮಾಡುವ ಪರಿಪಾಠ ಬೆಳೆಸಿಕೊಂಡು ಹೋಗಬಾರದು ಎಂದರು.ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಯಾವುದೇ ಕಾರ್ಯಕ್ರಮಗಳಿಗೆ ಜನಪ್ರತಿನಿಧಿ ಆಹ್ವಾನಿಸಬೇ ಇರುವುದು ಶಿಷ್ಟಾಚಾರ ಉಲ್ಲಂಘನೆ ಆಗುತ್ತದೆ. ಮುಂದೆ ಈ ರೀತಿ ಘಟನೆ ನಡೆದರೆ ಅಧಿಕಾರಿಗಳ ವಿರುದ್ಧ ಏನೂ ಕ್ರಮ ಕೈಗೊಳ್ಳಬೇಕೋ, ಅದನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
- - - ಟಾಪ್ ಕೋಟ್ ಕಳೆದ ಸೆ.14ಕ್ಕೆ ಬರಪೀಡಿತ ಜಿಲ್ಲೆಗಳ ಘೋಷಣೆಯನ್ನು ಸರ್ಕಾರ ಮಾಡಿದೆ, ಆದರೆ ಈವರೆಗೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಅಲ್ಲದೇ ಎನ್‌ಡಿಆರ್ ಎಫ್ ಹಾಗೂ ಎಸ್‌ಡಿಆರ್‌ಎಫ್ ಮೂಲಕ ಪರಿಹಾರ ನೀಡಲು ಅವಕಾಶವಿದ್ದು, ಇದರ ಬಗ್ಗೆಯೂ ಯೋಚಿಸಿಲ್ಲ- ಡಿ.ಎಸ್. ಅರುಣ್, ವಿಪ ಸದಸ್ಯ
- - - -8ಎಸ್‌ಎಂಜಿಕೆಪಿ01: ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಬುಧವಾರ ತೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಸಚಿವ ಮಧು ಬಂಗಾರಪ್ಪ ಮಾತನಾಡಿದರು.