ಸಾರಾಂಶ
ಕುಲಾಂತರಿ ಆಹಾರ (ಜಿಎಂ) ವಿರೋಧಿಸಿ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕುಲಾಂತರಿ ಆಹಾರ (ಜಿಎಂ) ವಿರೋಧಿಸಿ ಮತ್ತು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸುವಂತೆ ಆಗ್ರಹಿಸಿ ನಗರದಲ್ಲಿ ಕುಲಾಂತರಿ ಆಹಾರ ವಿರೋಧಿ ಒಕ್ಕೂಟ, ರೈತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರೊ.ಜಿ.ಎಸ್. ಜಯದೇವ್, ಕೆ.ವೆಂಕಟರಾಜು, ಹೊನ್ನೂರು ಪ್ರಕಾಶ್, ಪುಣಜನೂರು ದೊರೆಸ್ವಾಮಿ, ಮೂಕಹಳ್ಳಿ ಮಹದೇವಸ್ವಾಮಿ, ಕನ್ನಡಪರ ಸಂಘಟನೆಯ ಶ್ರೀನಿವಾಸಗೌಡ ನಮ್ಮ ದೇಶದ ಪಾರಂಪರಿಕ ಕೃಷಿ ಜ್ಞಾನ, ಹಿರಿಮೆ, ದೃಷ್ಟಿಕೋನ, ಆಯಾಮ ಬಹು ವಿಸ್ತಾರವಾದದ್ದು. ಇಂತಹ ಇತಿಹಾಸ ಹೊಂದಿರುವ ದೇಶಕ್ಕೆ ಕುಲಾಂತರಿ ಆಹಾರವನ್ನು ತರುವುದಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಪಿತೂರಿ ನಡೆಸುತ್ತಿವೆ. ಕುಲಾಂತರಿ ಆಹಾರಗಳ ಮೂಲಕ ಕೃಷಿ ವಿರೋಧಿ, ಸಮಾಜ ವಿರೋಧಿ, ಸಂಸ್ಕೃತಿ ವಿರೋಧಿ ಮತ್ತು ಪರಿಸರ ವಿರೋಧಿ ಕೃತ್ಯವನ್ನು ನೆಡಸಲು ಮುಂದಾಗಿವೆ ಎಂದು ಆರೋಪಿಸಿದರು.ಈಗಾಗಲೇ ಬಿಟಿ ಹತ್ತಿ, ಬದನೆಕಾಯಿ ಇವುಗಳು ರೈತರನ್ನು ಆತ್ಮಹತ್ಯೆಗೆ ತಳ್ಳುತ್ತಿವೆ, ಜೈವಿಕ ವ್ಯವಸ್ಥೆಯ ಉಲ್ಲಂಘನೆ ಮಾತ್ರವಲ್ಲದೆ, ಮಾನವ ಹಕ್ಕುಗಳು, ಪರಿಸರದ ಹಕ್ಕುಗಳು, ಪಂಚಾಯತಿ ಹಕ್ಕುಗಳು ಮತ್ತು ನಮ್ಮ ರೈತರ ಸಾರ್ವಭೌಮತ್ವದ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದರು. ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿ ಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ಭಾರತ ಸರ್ಕಾರದ ನಿರ್ಧಾರವನ್ನು ಖಂಡಿಸಬೇಕಾಗಿದೆ. ಇಲ್ಲದಿದ್ದರೆ ಮುಂದೆ ನಾವು ವಿಷಯುಕ್ತ ಆಹಾರ ಸೇವಿಸಬೇಕಾಗುತ್ತದೆ ಎಂದರು.ಅಂದು ಈಸ್ಟ್ ಇಂಡಿಯಾ ಕಂಪನಿ, ಇಂದು ಬಹುರಾಷ್ಟ್ರೀಯ ಕಂಪನಿ ಹೀಗೆ ಮುಂದುವರೆದರೆ, ನಮ್ಮ ಪಾರಂಪರಿಕ ಕೃಷಿ ಜ್ಞಾನ, ಹಳ್ಳಿ, ನಮ್ಮ ದನ, ಎಮ್ಮೆ, ಆಡು, ಕುರಿ, ಕೋಳಿ, ಅನ್ನ, ಕಾಳು-ಕಡಿ, ಕೂಲಿ-ಕಾರ್ಮಿಕರು, ಅಂಗಡಿ-ಮುಂಗಟ್ಟು, ಇತ್ಯಾದಿ ಮಾಯವಾಗಿ ಅವರ ಕೃತಕ ಸರಕುಗಳು, ವಿಷಮಿಶ್ರಿತ ಆಹಾರಗಳು, ವಿಷಪೂರಿತ ನಾಶಕಗಳು, ಮನೆ ಮನೆಗೂ ಬಂದು ನಮ್ಮ ಹಳ್ಳಿಗಳನ್ನು, ಆಹಾರಗಳನ್ನು ಹಾಳುಗೆಡವಿ ನಮ್ಮನ್ನು ನಮ್ಮ ಮಕ್ಕಳನ್ನು, ನಮ್ಮ ಸಮಾಜವನ್ನು ಹಿಂದೆಂದು ಕೇಳರಿಯದಂತಹ ರೋಗಗಳಿಗೆ ತಳ್ಳುತ್ತಾರೆ ಎಂದು ಕಿಡಿಕಾರಿದರು.ಕುಲಾಂತರಿ ಕಾಯಿದೆ ತಿರಸ್ಕರಿಸಿ ಹಾಗೂ ಸಹಜ ಬೇಸಾಯವನ್ನು ಗ್ರಾಪಂಗಳ ಮೂಲಕ ಸ್ಥಾಪಿಸಬೇಕು. ರಾಜ್ಯ ಸರಕಾರ ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯವೆಂದು ಘೋಷಣೆ ಮಾಡಬೇಕು. ಬೇಯರ್ ಐಸಿಎಆರ್ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ನಾವುಗಳು ಒಟ್ಟುಗೂಡಿ, ಕುಲಾಂತರಿ ಆಹಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರಕ್ಕೆ ಕಾಲಿಡದಂತೆ ಬುಡಸಮೇತ ಕಿತ್ತೊಗೆಯಬೇಕಿದ್ದು ಸೆಪ್ಟೆಂಬರ್ ೨೮, ೩೦ ಮತ್ತು ಅಕ್ಟೋಬರ್ ೧,೨ ರಂದು ನಾಲ್ಕು ದಿನಗಳ ಕಾಲ ತುಮಕೂರು ಜಿಲ್ಲೆಯ ಗಾಂಧೀಜಿ ಸಹಜ ಬೇಸಾಯ ಆಶ್ರಮ, ದೊಡ್ಡಹೊಸೂರಿನಲ್ಲಿ ನಡೆಯುವ ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.ಸತ್ಯಾಗ್ರಹದಲ್ಲಿ ಭಾಗವಹಿಸಲು ಜಿಲ್ಲೆಯಿಂದ 5 ಬಸ್‌ಗಳು ಸೆ.೩೦ ಸೋಮವಾರ ಹೊರಡಲಿದ್ದು, ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಇತರೆ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು. ಪ್ರತಿಭಟನೆಯಲಿ ಎಸ್. ಶಶಿಕುಮಾರ್ ನಟರಾಜು, ಸತೀಶ್, ಈಶ್ವರ್ ಪ್ರಭು, ಜ್ಯೋತಿ, ಗಂಗಮ್ಮ, ನವೀನ್ ಇತರರು ಭಾಗವಹಿಸಿದ್ದರು.