ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳನ್ನು ಅವಾಚ್ಯವಾಗಿ, ಕೇವಲವಾಗಿ ನಿಂದಿಸುತ್ತಿರುವ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಬಿಜೆಪಿ ಮುಖಂಡರ ದ್ವೇಷ ರಾಜಕೀಯ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಹರಿಹರದಲ್ಲಿ ಜ.24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.
- ಜಿಲ್ಲಾ ಸಚಿವ, ಅಧಿಕಾರಿಗಳ ವಿರುದ್ಧ ಹಗುರ ಹೇಳಿಕೆ ಸಲ್ಲದು: ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ ಆಕ್ರೋಶ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳನ್ನು ಅವಾಚ್ಯವಾಗಿ, ಕೇವಲವಾಗಿ ನಿಂದಿಸುತ್ತಿರುವ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಬಿಜೆಪಿ ಮುಖಂಡರ ದ್ವೇಷ ರಾಜಕೀಯ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಹರಿಹರದಲ್ಲಿ ಜ.24ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಹರಿಹರದ ಶ್ರೀ ಪಕ್ಕೀರ ಸ್ವಾಮಿ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಎಲ್.ಬಿ.ಹನುಮಂತಪ್ಪ, ಶ್ರೀನಿವಾಸ ನಂದಿಗಾವಿ, ಹಬೀದ್ ಅಲಿ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು.ಶಾಸಕ ಬಿ.ಪಿ.ಹರೀಶ ಹರಿಹರ ಕ್ಷೇತ್ರ ಅಭಿವೃದ್ಧಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಆದರೆ, ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಮೊನ್ನೆ ದಾವಣಗೆರೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ, ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡುವಾಗಲೂ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಕಾಡಜ್ಜಿಯಲ್ಲಿ ಮಣ್ಣನ್ನು ಅಕ್ರಮ ಸಾಗಾಟ ಮಾಡಿದ್ದಾರೆ ಎನ್ನುವ ಬದಲು ಕಾನೂನು ಪ್ರಕಾರ ಲಿಖಿತ ದೂರು ನೀಡಲಿ. ಈಗಾಗಲೇ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಜೆಪಿ ಶಾಸಕ ಬಿ.ಪಿ.ಹರೀಶ ಸೇರಿದಂತೆ ವಿಪಕ್ಷದವರ ಆರೋಪ ಏನಿವೆಯೋ ತನಿಖೆಯಾಗಲಿ ಅಂತಾ ಹೇಳಿದ್ದಾರೆ. 3 ಸಲ ಸಚಿವರಾಗಿರುವ ಎಸ್ಸೆಸ್ಸೆಂ ವಿಪಕ್ಷದವರ ಮೇಲೆ ಸುಖಾಸುಮ್ಮನೆ ಕೇಸ್ ಮಾಡಿ ಅಂತಾ ಎಂದಿಗೂ ಹೇಳಿಲ್ಲ. ಆದರೆ, ಹರೀಶ ಶಾಸಕನಾದ ಕೆಲವೇ ದಿನಕ್ಕೆ ಕೇಸ್ ಆದ ವ್ಯಕ್ತಿ ಎಂದು ದಿನೇಶ್ ಟೀಕಿಸಿದರು.ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಗ್ಗೆ ಇಲ್ಲಸಲ್ಲದ ಆರೋಪ ಸರಿಯಲ್ಲ. ನಿತ್ಯವೂ ಎಸ್.ಎಸ್. ಮಲ್ಲಿಕಾರ್ಜುನ ಜೊತೆಗೆ ಫೋಟೋ ತೆಗೆಸಿಕೊಳ್ಳಲೆಂದೇ 500-600 ಜನ ಬರುತ್ತಾರೆ. ಹಾಗೆ ಬಂದವರಲ್ಲಿ ಯಾರು ಏನೆಲ್ಲಾ ಮಾಡುತ್ತಾರೆಂದು ಕೇಳಲಾಗುತ್ತದೆಯೇ? ಹೀಗೆ ಫೋಟೋ ತೆಗೆಸಿಕೊಂಡ ಕೆಲವರು ವಿವಿಧ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೇ ಬಿಜೆಪಿ ಯಶವಂತ ರಾವ್ ಜಾಧವ್ ಜೊತೆಗೆ ಯಾರಾದರೂ ಫೋಟೋ ತೆಗೆಸಿಕೊಂಡವರು ಸೆಕೆಂಡ್ಸ್, ಥರ್ಡ್ಸ್ ದಂಧೆ ಮಾಡಿ, ಸಿಕ್ಕಿ ಬಿದ್ದರೆ ಯಶವಂತ ರಾವ್ ಬೆಂಬಲಿಗರು ಅಂತಾ ಅರ್ಥವೇ? ಫೋಟೋ ತೆಗೆಸಿಕೊಂಡವರು ತಪ್ಪು ಮಾಡಿ ಸಿಕ್ಕಿ ಬಿದ್ದರೆ ಯಶವಂತ ರಾವ್ ಹೊಣೆಗಾರನಾಗಲೀ, ತಪ್ಪಿತಸ್ಥನಾಗಲೀ ಅಲ್ಲ ಎಂದರು.
ಪಕ್ಷದ ಮುಖಂಡರಾದ ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಂಗಳಮ್ಮ, ಎ.ನಾಗರಾಜ ಇತರರು ಇದ್ದರು.- - -
(ಕೋಟ್) ಸಚಿವ, ಡಿಸಿ, ಎಸ್‌ಪಿ ಬಗ್ಗೆ ಹಗುರವಾಗಿ ಮಾತನಾಡಿರುವ ಬಿ.ಪಿ.ಹರೀಶ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಿಗೂ ಕಾಂಗ್ರೆಸ್ ಮನವಿ ನೀಡಿದೆ. ಯಶವಂತ ರಾವ್ ಆರೋಪಿಸಿದಂತೆ ನಾನು ಸುದೀರ್ಘ ಕಾಲ ಜೈಲಿನಲ್ಲಿರಲಿಲ್ಲ. 4 ದಿನ ಇದ್ದೆ. ಎಲ್.ಬಸವರಾಜ ಕೇಸ್‌ನಿಂದ ಖುಲಾಸೆಯೂ ಆಗಿದ್ದೇನೆ. ಬಿಜೆಪಿಯವರ ಆರೋಪಗಳಿಗೆ ಹರಿಹರ ಪ್ರತಿಭಟನೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ.- ದಿನೇಶ ಕೆ.ಶೆಟ್ಟಿ, ದೂಡಾ ಅಧ್ಯಕ್ಷ.
- - --22ಕೆಡಿವಿಜಿ1: ದಾವಣಗೆರೆಯಲ್ಲಿ ಗುರುವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಬಿಜೆಪಿ ಮುಖಂಡರ ನಡೆ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.