ಅಕ್ರಮ ಗೋಸಾಗಾಟ, ಗೋಹತ್ಯೆ ಖಂಡಿಸಿ ಪ್ರತಿಭಟನೆ

| Published : Mar 18 2025, 12:30 AM IST / Updated: Mar 18 2025, 12:31 AM IST

ಸಾರಾಂಶ

ಭಟ್ಕಳದಲ್ಲಿ ರಾಜಾರೋಷವಾಗಿ ಗೋವುಗಳನ್ನು ಕದ್ದು ಮಾರುವ ಕೆಲಸ ನಡೆಯುತ್ತಿದೆ.

ಭಟ್ಕಳ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆಯನ್ನು ತೀವ್ರವಾಗಿ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳದಲ್ಲಿ ರಾಜಾರೋಷವಾಗಿ ಗೋವುಗಳನ್ನು ಕದ್ದು ಮಾರುವ ಕೆಲಸ ನಡೆಯುತ್ತಿದೆ. ಪೊಲೀಸರು ಅಸಹಾಯಕರಾಗಿ ಕುಳಿತಿದ್ದಾರೆ. ಬಿಜೆಪಿ ಆಡಳಿತ ಇದ್ದ ಸಂದರ್ಭದಲ್ಲಿ ಚೆಕ್‌ಪೋಸ್ಟ್ ಬಿಗುಗೊಳಿಸಲಾಗಿತ್ತು. ಮುಂಬೈನಿಂದ ಭಟ್ಕಳಕ್ಕೆ ನೇರವಾಗಿ ಗೋವು ತುಂಬಿದ ಲಾರಿ ಬರುತ್ತಿದ್ದರೂ ಏನೂ ಮಾಡಲು ಆಗುತ್ತಿಲ್ಲ. ಗೋಸಾಗಾಟಗಾರರಿಗೆ ಗುಂಡು ಹಾಕಿ ಎಂದು ಹೇಳುವ ಜಿಲ್ಲಾ ಉಸ್ತುವಾರಿ ಸಚಿವರು ಗೋಸಾಗಾಟಕ್ಕೆ ಹಿಂಬದಿಯಿಂದ ಸಹಕಾರ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿಜವಾಗಿಯೂ ಗೋವುಗಳ ಬಗ್ಗೆ ಕಾಳಜಿ ಇದ್ದರೆ ಗೋ ಸಾಗಾಟ ತಡೆಯಬೇಕು ಎಂದರು.

ಪೊಲೀಸರು ನಮ್ಮ ಜತೆಗೆ ಬಂದರೆ ಎಲ್ಲೆಲ್ಲಿ ಗೋವುಗಳನ್ನು ಅಕ್ರಮವಾಗಿ ಇಟ್ಟಿದ್ದಾರೆ ಎನ್ನುವುದನ್ನು ತೋರಿಸಿಕೊಡುತ್ತೇವೆ. ಭಟ್ಕಳದಲ್ಲಿ ನಡೆಯುತ್ತಿರುವ ಅಕ್ರಮ ಗೋವು ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಹೆಚ್ಚುತ್ತಿರುವ ಗೋಹತ್ಯೆ ಮತ್ತು ಗೋ ಸಾಗಾಟಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ರಾಜೇಶ ನಾಯ್ಕ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರಾಮಕೃಷ್ಣ ನಾಯ್ಕ, ಜಯಂತ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಬಿಜೆಪಿ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಪ್ರಮುಖರಾದ ಕೃಷ್ಣ ನಾಯ್ಕ ಆಸರಕೇರಿ, ದಿನೇಶ ನಾಯ್ಕ, ದೀಪಕ ನಾಯ್ಕ, ಶ್ರೀನಿವಾಸ ನಾಯ್ಕ, ಮಾದೇವ ನಾಯ್ಕ ಬೆಳಕೆ, ಸವಿತಾ ಗೊಂಡ ಇದ್ದರು. ತಹಸೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿದರು.

ಭಟ್ಕಳದಲ್ಲಿ ಅಕ್ರಮ ಗೋಸಾಗಾಟ, ಗೋಹತ್ಯೆ ಮತ್ತು ಚೆಕ್‌ಪೋಸ್ಟ್ ಬಿಗುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಭಟ್ಕಳದಲ್ಲಿ ಅಕ್ರಮ ಗೋಸಾಗಾಟ, ಗೋಹತ್ಯೆ ಮತ್ತು ಚೆಕ್‌ಪೋಸ್ಟ್ ಬಿಗುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.