ಸಾರಾಂಶ
ಮರಿಯಮ್ಮನಹಳ್ಳಿ: ಇಲ್ಲಿನ ಬಿಎಂಎಂ ಇಸ್ಪಾತ್ ಕಂಪನಿಯಿಂದ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ವಿಜಯನಗರ ಜಿಲ್ಲಾ ಘಟಕದಿಂದ ಸೋಮವಾರ ಪಟ್ಟಣದ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಿಂದ ಡಣಾಪುರ ಬಳಿ ಇರುವ ಬಿಎಂಎಂ ಕಾರ್ಖಾನೆಯವರೆಗೆ ಪಾದಯಾತ್ರೆ ಮುಖಾಂತರ ತೆರಳಿ ಕಾರ್ಖಾನೆಯ ಗೇಟ್ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಎಲ್.ಹನುಮ ನಾಯ್ಕ್ ಮಾತನಾಡಿ, ಬಿಎಂಎಂ ಕಾರ್ಖಾನೆಗೆ ಸ್ಥಳೀಯ ರೈತರು ಭೂಮಿ ನೀಡಿದ್ದರೂ ಸ್ಥಳೀಯ ರೈತರ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಕೆಲಸಕ್ಕೆ ತೆಗೆದುಕೊಳ್ಳದೇ ಪದೇಪದೇ ರೈತರನ್ನು ಅಲೆದಾಡುಸುತ್ತಿರುವುದು ಸರಿಯಲ್ಲ. ತಕ್ಷಣವೇ ಭೂಮಿ ನೀಡಿದ ಸ್ಥಳೀಯ ರೈತರ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.ಈಗಾಗಲೇ ಭೂಮಿ ಕೊಟ್ಟ ರೈತರ ಮಕ್ಕಳು ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಸೇವಾವಧಿ ಆಧರಿಸಿ ಇನ್‌ಕ್ರಿಮೆಂಟ್ ಹೆಚ್ಚಳ ಮಾಡಬೇಕು. ಕೆಲ ಕಾರ್ಮಿಕರಿಗೆ ವಿನಾಕಾರಣ ಕಿರುಕುಳ ನೀಡಿ ಕೆಲಸದಿಂದ ವಜಾ ಮಾಡಿದ ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಖಾನೆ ಬಳಿಯ ಗುಂಡಾ ಸ್ಟೇಷನ್ ಗ್ರಾಮವನ್ನು ಸೂಕ್ತ ಜಾಗ ನಿಗದಿಪಡಿಸಿ ನಂತರ ಸ್ಥಳಾಂತರಕ್ಕೆ ಮುಂದಾಬೇಕು. ಬಿಎಂಎಂ ಕಾರ್ಖಾನೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಅವರು ಹೇಳಿದರು.ಚಿತ್ರದುರ್ಗದ ಬಂಜಾರ್ ಗುರುಪೀಠದ ಸ್ವಾಮೀಜಿ ಸರದಾರ್ ಸೇವಲಾಲ್ ಸ್ವಾಮೀಜಿ, ತಿಪ್ಪೇಶ್ವರ ಸ್ವಾಮೀಜಿ, ಸಂಘಟನೆಯ ಮುಖಂಡರಾದ ಲಿಂಗ್ಯಾ ನಾಯ್ಕ, ರಾಜು ನಾಯ್ಕ, ಉಮೇಶ್ ನಾಯ್ಕ, ಗೋಪಾಲ ನಾಯ್ಕ, ಮಂಜು ನಾಯ್ಕ, ಕುಮಾರ ನಾಯ್ಕ, ಕೊಟ್ರೇಶ್ ನಾಯ್ಕ, ಕಾವೇರಿಬಾಯಿ, ಶಾಂತಿಬಾಯಿ, ರೂಪ್ಲಿಬಾಯಿ, ಪಾರ್ವತಿಬಾಯಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ವೇಳೆ ಮರಿಯಮ್ಮನಹಳ್ಳಿ ಪೊಲೀಸರು ಬಿಗಿ ಪೋಲೀಸ್ ಬಂದೋಬಸ್ತ್ ಹಮ್ಮಿಕೊಂಡಿದ್ದರು.