ಸಾರಾಂಶ
ತಾಲೂಕಿನ ಬಂಜಾರ ಸಮಾಜದ ವಿವಿಧ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಒಳ ಮೀಸಲಾತಿ ವರ್ಗಿಕರಣ ವಿರೋಧಿಸಿ, ಕೇಂದ್ರ ಸರ್ಕಾರಕ್ಕೆ ಮಾಡಿದ ಶಿಫಾರಸ್ಸು ಪತ್ರ ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಿನ ಬಂಜಾರ ಸಮಾಜದ ವಿವಿಧ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ನ್ಯಾಯವಾದಿ ಹನುಮಂತಪ್ಪ ಲಮಾಣಿ, ಆರ್ಟಿಕಲ್ 341ಕ್ಕೆ ತಿದ್ದುಪಡಿ ಆದೇಶ ಹಿಂಪಡೆಯದಿದ್ದಲ್ಲಿ ಬಂಜಾರ, ಬೋವಿ, ಕೊರಚ, ಕೊರಮ ಹಾಗೂ ಅಲೆಮಾರಿ ಜನಾಂಗಕ್ಕೆ ಅನ್ಯಾಯವಾಗಲಿದೆ. ಈ ಕುರಿತು ಕಳೆದ ಸರ್ಕಾರವಿದ್ದಾಗ್ಯೂ ನಾವು ಹೋರಾಟ ನಡೆಸಿದ್ದೆವು. ಆದರೆ ಅಧಿಕಾರವಧಿಯ ಕೊನೆಗಳಿಗೆಯಲ್ಲಿ ಸದಾಶಿವ ಆಯೋಗದ ವರದಿಯನ್ನಾಧರಿಸಿ ಒಳಮೀಸಲಾತಿಗೆ ನಿರ್ಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು ಎಂದರು.
ಸಮಾಜದ ಮುಖಂಡ ಅರ್ಜುನಪ್ಪ ಲಮಾಣಿ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ಒಳಮೀಸಲಾತಿ ವಿಚಾರವಾಗಿ ಜ.18 ರಂದು ಮತ್ತೊಂದು ತೀರ್ಮಾನ ಮಾಡಿದ್ದು, ಶೇ.4.5 ಇದ್ದದ್ದನ್ನು ಕೇವಲ ಶೇ.3ಕ್ಕೆ ಇಳಿಸಿ ಶಿಫಾರಸು ಮಾಡಿದೆ. ಇದರಿಂದ ಸಂವಿಧಾನ ಬದ್ಧವಾಗಿ ಹಿಂದುಳಿದವರು ಎಂದು ಗುರ್ತಿಸಲಾದ ಬಂಜಾರ, ಬೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಜನಾಂಗಗಳಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ನಮ್ಮ ಹಕ್ಕುಗಳಿಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ವಹಿಸಲು ಮನವಿ ಮಾಡಿದರು.ಪರಮೇಶ ನೂರಪ್ಪನಾಯಕ ಮಾತನಾಡಿ, ಒಳಮೀಸಲಾತಿಗೆ ಕೈಹಾಕಿದ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಒಳ ಮೀಸಲಾತಿ ಕುರಿತು ಯಥಾಸ್ಥಿತಿ ಮುಂದುವರೆಸುವ ಭರವಸೆ ನೀಡಿತ್ತು. ಕೊಟ್ಟ ಮಾತಿಗೆ ತಪ್ಪುತ್ತಿರುವ ಕಾಂಗ್ರೆಸ್ ಮೀಸಲಾತಿ ಶೇ.4.5 ಇದ್ದದ್ದನ್ನು ಕೇವಲ ಶೇ.3ಕ್ಕೆ ಇಳಿಸಿ ಶಿಫಾರಸು ಮಾಡಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರಕ್ಕೆ ಬಂದಂತಹ ಸ್ಥಿತಿ ನಿಮಗೂ ಬರಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಿರಕಪ್ಪ ಲಮಾಣಿ, ನಾಗಪ್ಪ ಹಂಚಿನಮನಿ, ಗದಿಗೇಶ ಲಮಾಣಿ, ಕೆ.ಆರ್. ಲಮಾಣಿ, ಮಲ್ಲೇಶಪ್ಪ ಕಬ್ಬೂರ, ಶೇಖಪ್ಪ ಲಮಾಣಿ, ಮಂಜು ಲಮಾಣಿ, ಲೋಕೇಶ್ ಲಮಾಣಿ, ತಿರಕಪ್ಪ ನಾಯಕ್, ಪ್ರಕಾಶ ಲಮಾಣಿ ಹಾಗೂ ವಿವಿಧ ತಾಂಡಾದವರಿದ್ದರು.